ವಸತಿ ಇಲಾಖೆ ಭ್ರಷ್ಟಾಚಾರ ಬಾಂಬ್ ಬೆನ್ನಲ್ಲೇ ಡ್ಯಾಮೇಜ್ ಕಂಟ್ರೋಲ್ ಗೆ ಬಂದ ರಣದೀಪ್ ಸುರ್ಜೇವಾಲ ಇದೀಗ ಕಂಗಾಲಾಗಿ ಹೋಗಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿನ ಬಣ ಬಡಿದಾಟ ಅವರ ಕಣ್ಣೆದುರೇ ಬಹಿರಂಗವಾಗ್ತಿರೋದು ದಂಗಾಗುವಂತೆ ಮಾಡಿದೆ.
ಸಮಸ್ಯೆ ಆಲಿಸಲು ಶಾಸಕರನ್ನು ಆಹ್ವಾನಿಸಿದ್ರೆ, ಬಂದವರೆಲ್ಲಾ ಸಿಎಂ ಬದಲಾವಣೆ ವಿಚಾರವನ್ನೇ ಪ್ರಸ್ತಾಪಿಸ್ತಿರೋದು ಸುರ್ಜೇವಾಲಾಗೆ ನುಂಗರಾದ ತುತ್ತಾಗಿದೆ. ಒಂದೆಡೆ ಡಿಕೆ ಶಿವಕುಮಾರ್ ರನ್ನು ಸಿಎಂ ಮಾಡುವಂತೆ ಅವರ ಪರಮಾಪ್ತ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಬ್ಯಾಟಿಂಗ್ ಮಾಡ್ತಿದ್ದಾರೆ. ಇತ್ತ ಖುದ್ದು ಡಿಕೆಶಿಯೇ ಹುಸೇನ್ ಗೆ ತಪ್ಪಗಿರುವಂತೆ ಸೂಚಿಸಿ ನೋಟೀಸ್ ನೀಡಿದ ಬಳಿಕವೂ, ನಾನು ನನ್ನ ಹೇಳಿಕೆಗೆ ಬದ್ಧ ಅಂತಾ ಹುಸೇನ್ ಅಬ್ಬರಿಸಿದ್ದಾರೆ. ಇದರೊಟ್ಟಿಗೆ ಮಾಗಡಿ ಶಾಸಕ ಬಾಲಕೃಷ್ಣ ಕೂಡಾ ಸುರ್ಜೇವಾಲ ಮುಂದೆ ಡಿಕೆ ಪರ ಬ್ಯಾಟ್ ಬೀಸಿದ್ದಾರೆ.
ಆದ್ರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಸಿದ್ದು ಬಣದ ನಾಯಕರೂ ಸುರ್ವೇವಾಲ ಮುಂದೆ ನಾಯಕತ್ವ ಬದಲಾದ್ರೆ ಈ ಸರ್ಕಾರದ ಅಸ್ತಿತ್ವಕ್ಕೇ ಧಕ್ಕೆ ಬರುತ್ತೆ ಅಂತಾ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅದ್ರಲ್ಲೂ ಶಾಸಕರಾದ ಕೆವೈ ನಂಜೇಗೌಡ, ಅನಿಲ್ ಚಿಕ್ಕಮಾದು, ಪ್ರಿಯಾ ಕೃಷ್ಣ ಸೇರಿ ಮತ್ತಿತರರು, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದಿದ್ದು, ಒಂದೊಮ್ಮೆ ನಾಯಕತ್ವ ಬದಲಾದ್ರೆ ಈ ಸರ್ಕಾರವೇ ಪತನವಾಗುವ ಸುಳಿವು ನೀಡಿದ್ದಾರೆ. ಈ ಮೂಲಕ ಎದುರಾಗಿರೋ ಪರಿಸ್ಥಿತಿ ನಿಭಾಯಿಸಲು ಬಂದು ಸುಮ್ಮನಿರದೆ ದಾರಿಯಲ್ಲಿ ಹೋಗೋ ಮಾರಿಯನ್ನ ಮನೆಗೆ ಕರೆದ್ರು ಎನ್ನುವಂಥಾ ಪರಿಸ್ಥಿತಿಯನ್ನೀಗ ಹೈಕಮಾಂಡ್ ಸೃಷ್ಟಿಸಿಕೊಂಡಿದೆ ಎನ್ನುವಂತಾಗಿದೆ.