ಬೆಂಗಳೂರು: ವಿಪ ಸದಸ್ಯ ಸೂರಜ್ ರೇವಣ್ಣ (Suraj Revanna) ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿರುವ ಸಂತ್ರಸ್ತ ಯುವಕನಿಗೆ ಭಾನುವಾರ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ (Bowring Hospital) ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯೇ ಸಂತ್ರಸ್ತನನ್ನು ಹಾಸನದಿಂದ ಬೌರಿಂಗ್ ಆಸ್ಪತ್ರೆಗೆ ಪೊಲೀಸರು ಕರೆ ತಂದಿದ್ದಾರೆ. ಹಾಸನದಲ್ಲಿ ವೈದ್ಯಕೀಯ ಪರೀಕ್ಷೆಗೆ (Medical Test) ನಿರಾಕರಿಸಿದ ಹಿನ್ನೆಲೆಯಲ್ಲಿ ಸಂತ್ರಸ್ತನ ಮನವಿ ಮೇರೆಗೆ ಬೆಂಗಳೂರಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಹೊಳೆನರಸೀಪುರ ಪೊಲೀಸರು ತಡರಾತ್ರಿ 2ರ ವರೆಗೆ ಯುವಕನನ್ನು ಬೌರಿಂಗ್ ಆಸ್ಪತ್ರೆಗೆ ಕರೆತಂದಿದ್ದಾರೆ.
ಈಗಾಗಲೇ ವೈದ್ಯರು ಕೌನ್ಸೆಲಿಂಗ್ ಮುಗಿಸಿದ್ದಾರೆ. ಮುಂದಿನ ಪರೀಕ್ಷೆಗಳಿಗೆ ಹಿರಿಯ ವೈದ್ಯರ ಆಗಮನಕ್ಕೆ ಕಾಯುತ್ತಿದ್ದಾರೆ. ಸಂತ್ರಸ್ತ ಲೈಂಗಿಕ ಕ್ರಿಯೆಗೆ ಸಮರ್ಥನಾಗಿದ್ದಾನಾ ಎಂಬ ಪರೀಕ್ಷೆ ಇದಾಗಿದೆ. ಸಂತ್ರಸ್ತನಿಗೆ ರಕ್ತದೊತ್ತಡ, ಶುಗರ್, ಇಸಿಜಿ, ದೇಹದ ಮೇಲೆ ಕಚ್ಚಿರುವ ಕಲೆಗಳ ಬಗ್ಗೆ ತಪಾಸಣೆ ನಡೆಸಲಾಗಿದೆ. ಹಿರಿಯ ವೈದ್ಯರ ಸಮ್ಮುಖದಲ್ಲಿ ಲೈಂಗಿಕ ಕ್ರಿಯೆ ಸಾಮರ್ಥ್ಯ ಪರೀಕ್ಷೆ ನಡೆಲಿದೆ.
ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೂರಜ್ ರೇವಣ್ಣ ಅವರನ್ನು ಬಂಧಿಸಲಾಗಿದೆ.