ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿ ಕಾನೂನುಬಾಹಿರ ಎಂದು ಅಲ್ಲಿನ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಭಾರತದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳಲಾಗುವ ಸರಕುಗಳ ಮೇಲಿದ್ದ ಸುಂಕವನ್ನು ಶೇ.18ರಿಂದ ಶೇ.10ಕ್ಕೆ ಇಳಿಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ತಮ್ಮ ಈ ಹಿಂದಿನ ಆದೇಶ ಅಸಿಂಧುಗೊಂಡ ಬೆನ್ನಲ್ಲೇ, ಟ್ರಂಪ್ ಹೊಸ ಜಾಗತಿಕ ಸುಂಕದ ಆದೇಶಕ್ಕೆ ಸಹಿ ಹಾಕಿದ್ದಾರೆ.
1977ರ ‘ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ’ಯನ್ನು ಬಳಸಿಕೊಂಡು ಟ್ರಂಪ್ ಹೇರಿದ್ದ ವ್ಯಾಪಕ ಸುಂಕಗಳನ್ನು ಸುಪ್ರೀಂ ಕೋರ್ಟ್ 6-3 ಅನುಪಾತದ ತೀರ್ಪಿನಲ್ಲಿ ತಳ್ಳಿಹಾಕಿದೆ. ಶಾಂತಿಕಾಲದಲ್ಲಿ ಸುಂಕ ಹೇರಲು ಈ ಕಾಯ್ದೆಯು ಅಧ್ಯಕ್ಷರಿಗೆ ಅಧಿಕಾರ ನೀಡುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅಭಿಪ್ರಾಯಪಟ್ಟಿದ್ದಾರೆ. ಈ ತೀರ್ಪಿನಿಂದ ಆಕ್ರೋಶಗೊಂಡಿರುವ ಟ್ರಂಪ್, “ನ್ಯಾಯಾಲಯದ ಕೆಲವು ಸದಸ್ಯರ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ. ಯಾವ ನ್ಯಾಯಾಲಯವೂ ಅಧ್ಯಕ್ಷರಿಗಿಂತ ಮೇಲಲ್ಲ ” ಎಂದು ಕಿಡಿಕಾರಿದ್ದಾರೆ. ಅಲ್ಲದೆ, ವಿದೇಶಿ ಹಿತಾಸಕ್ತಿಗಳು ನ್ಯಾಯಾಲಯದ ಮೇಲೆ ಪ್ರಭಾವ ಬೀರಿವೆ ಎಂದು ಯಾವುದೇ ಪುರಾವೆಗಳಿಲ್ಲದೆ ಆರೋಪಿಸಿದ್ದಾರೆ.
ಭಾರತದ ಮೇಲಾಗುವ ಪರಿಣಾಮಗಳೇನು?
ಈ ಹಿಂದೆ ರಷ್ಯಾ ತೈಲ ಖರೀದಿ ವಿಚಾರವಾಗಿ ಭಾರತದ ಮೇಲೆ ಹೇರಲಾಗಿದ್ದ ಶೇ. 25ರಷ್ಟು ಸುಂಕವನ್ನು ಇತ್ತೀಚೆಗಷ್ಟೇ ಶೇ.18ಕ್ಕೆ ಇಳಿಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಆ ಶೇ.18ರ ಸುಂಕದ ಕಾನೂನು ಆಧಾರವೇ ಇಲ್ಲದಂತಾಗಿತ್ತು. ತಾಂತ್ರಿಕವಾಗಿ ಭಾರತದ ಮೇಲಿನ ಸುಂಕ ಶೇ.3.5ಕ್ಕೆ (ಎಂಎಫ್ಎನ್ ದರ) ಇಳಿಯಬೇಕಿತ್ತು. ಆದರೆ, ಟ್ರಂಪ್ ತಕ್ಷಣವೇ ಕಾರ್ಯಪ್ರವೃತ್ತರಾಗಿ ‘ವ್ಯಾಪಾರ ಕಾಯ್ದೆ 1974ರ ಸೆಕ್ಷನ್ 122’ ಅಡಿಯಲ್ಲಿ ಹೊಸದಾಗಿ ಶೇ.10ರಷ್ಟು ಸುಂಕ ಘೋಷಿಸಿದ್ದಾರೆ. ಇದರಿಂದಾಗಿ ಭಾರತಕ್ಕೆ ಈ ಹಿಂದೆ ನಿಗದಿಯಾಗಿದ್ದ ಶೇ.18ಕ್ಕಿಂತ ಕಡಿಮೆ ಅಂದರೆ ಶೇ.10ರಷ್ಟು ಸುಂಕ ಅನ್ವಯವಾಗಲಿದೆ.
ಈ ಹೊಸ ಶೇ.10ರಷ್ಟು ಸುಂಕವು ಫೆಬ್ರವರಿ 24ರಿಂದ ಜಾರಿಗೆ ಬರಲಿದ್ದು, ಮುಂದಿನ 150 ದಿನಗಳವರೆಗೆ ಚಾಲ್ತಿಯಲ್ಲಿರುತ್ತದೆ. ಔಷಧ ವಲಯ ಮತ್ತು ಕೆನಡಾ-ಮೆಕ್ಸಿಕೊ ಒಪ್ಪಂದದ ಅಡಿ ಬರುವ ಸರಕುಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಮೆರಿಕದ ವ್ಯಾಪಾರ ಕೊರತೆಯನ್ನು ನೀಗಿಸಲು ಈ ಕ್ರಮ ಅನಿವಾರ್ಯ ಎಂದು ವೈಟ್ ಹೌಸ್ ಸಮರ್ಥಿಸಿಕೊಂಡಿದೆ. ಭಾರತದೊಂದಿಗಿನ ಸಂಬಂಧದ ಕುರಿತು ಮಾತನಾಡಿದ ಟ್ರಂಪ್, “ಭಾರತದೊಂದಿಗಿನ ಸಂಬಂಧ ಅದ್ಭುತವಾಗಿದೆ ಮತ್ತು ವ್ಯಾಪಾರ ಒಪ್ಪಂದ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಹಣ ಮರುಪಾವತಿ ಗೊಂದಲ
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಈವರೆಗೆ ಅಕ್ರಮವಾಗಿ ವಸೂಲಿ ಮಾಡಲಾದ ಬಿಲಿಯನ್ ಗಟ್ಟಲೆ ಡಾಲರ್ ಸುಂಕವನ್ನು ಕಂಪನಿಗಳಿಗೆ ಮರುಪಾವತಿಸಬೇಕೇ ಎಂಬ ಗೊಂದಲ ಸೃಷ್ಟಿಯಾಗಿದೆ. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರು, “ಜನರಿಂದ ಅಕ್ರಮವಾಗಿ ಕಸಿದುಕೊಂಡ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ. ಇತ್ತ ಟ್ರಂಪ್ ಅವರ ಈ ಹಿನ್ನಡೆಯನ್ನು ಅಮೆರಿಕದ ಉದ್ಯಮ ವಲಯ ಸ್ವಾಗತಿಸಿದ್ದು, ವಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ.
ಇದನ್ನೂ ಓದಿ : 33 ಮಕ್ಕಳ ಮೇಲೆ ಅಮಾನವೀಯ ಲೈಂಗಿಕ ದೌರ್ಜನ್ಯ | ದಂಪತಿಗೆ ಮರಣದಂಡನೆ ಶಿಕ್ಷೆ



















