ನವದೆಹಲಿ: ಯಾವುದೇ ವ್ಯಕ್ತಿಯನ್ನು ‘ಮಿಯಾ-ತಿಯಾ’ ಅಥವಾ ‘ಪಾಕಿಸ್ತಾನಿ’ ಎಂದು ಕರೆಯುವುದು ಉತ್ತಮ ಅಭಿರುಚಿಯ ಹೇಳಿಕೆಯಲ್ಲ ಎಂದು ಹೇಳಬಹುದಷ್ಟೇ ಹೊರತು, ಇದು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವಂತಹ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟಪಡಿಸಿದೆ.
ಈ ತೀರ್ಪು, ಅಭಿವ್ಯಕ್ತಿಯ ಸ್ವಾತಂತ್ರ್ಯ ಮತ್ತು ಧಾರ್ಮಿಕ ಭಾವನೆಗಳ ನಡುವಿನ ಸಮತೋಲನದ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ. ಹೇಳಿಕೆ ಆಕ್ಷೇಪಾರ್ಹವಿದ್ದರೂ, ಕಾನೂನಾತ್ಮಕವಾಗಿ ಅಪರಾಧವಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಪುನರುಚ್ಛರಿಸಿದೆ.
ಮುಸ್ಲಿಂ ಸರ್ಕಾರಿ ನೌಕರನನ್ನು ‘ಪಾಕಿಸ್ತಾನಿ’ ಎಂದು ಕರೆದ ಆರೋಪದ ಮೇಲೆ ಹಿಂದೂ ವ್ಯಕ್ತಿಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಇತ್ಯರ್ಥಗೊಳಿಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ನೇತೃತ್ವದ ನ್ಯಾಯಪೀಠ ಈ ಮಹತ್ವದ ಅಭಿಪ್ರಾಯ ನೀಡಿದೆ.
ನ್ಯಾಯಾಲಯದ ಹೇಳಿದ್ದೇನು?
ಈ ಕುರಿತು ನಡೆದ ವಿಚಾರಣೆಯಲ್ಲಿ, ದೂರುದಾರರ ಪರ ವಕೀಲರು, ‘ಮಿಯಾ-ತಿಯಾ’ ಮತ್ತು ‘ಪಾಕಿಸ್ತಾನಿ’ ಎಂಬ ಪದಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತವೆ ಎಂದು ನ್ಯಾಯಪೀಠ ಮುಂದೆ ಮಂಡಿಸಿದರು.
“ನಿಸ್ಸಂದೇಹವಾಗಿ, ಈ ಹೇಳಿಕೆಗಳು ಕಳಪೆ ನಡವಳಿಕೆಯನ್ನು ಪ್ರತಿಬಿಂಬಿಸುತ್ತವೆ. ಆದರೆ, ಧಾರ್ಮಿಕ ಭಾವನೆಗಳಿಗೆ ನೇರವಾಗಿ ನೋವುಂಟುಮಾಡಿದ ಬಗ್ಗೆ ಯಾವುದೇ ಪ್ರಬಲ ಪುರಾವೆ ಇಲ್ಲ,” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ .
ಘಟನೆ ಹಿನ್ನೆಲೆ
ಜಾರ್ಖಂಡ್‌ನ ಉರ್ದು ಭಾಷಾಂತರಕಾರ ಮತ್ತು ಹಂಗಾಮಿ ಗುಮಾಸ್ತರಾಗಿರುವ ದೂರುದಾರರು, ಹರಿ ನಂದನ್ ಸಿಂಗ್ ಎಂಬ ವ್ಯಕ್ತಿಯನ್ನು ಭೇಟಿ ಮಾಡಿ ಮಾಹಿತಿ ಹಕ್ಕು (RTI) ಅರ್ಜಿಯ ಬಗ್ಗೆ ಮಾಹಿತಿ ಕೇಳಿದ್ದರು.
ಇದನ್ನೂ ಓದಿ: Jagannath Tattoo: ವಿದೇಶಿ ಯುವತಿಯ ತೊಡೆಯಲ್ಲಿ ಜಗನ್ನಾಥನ ಟ್ಯಾಟೂ: ಪಾರ್ಲರ್ ಮಾಲೀಕ ಮತ್ತು ಕಲಾವಿದ ಬಂಧನ
ಆದರೆ, ಸಿಂಗ್ ತಮ್ಮ ಕರ್ತವ್ಯ ನಿರ್ವಹಿಸುವ ಬದಲಿಗೆ, ದೂರುದಾರರ ಧರ್ಮವನ್ನು ಉಲ್ಲೇಖಿಸಿ ಅವಮಾನಕರ ನಿಂದನೆ ನಡೆಸಿದರೆಂದು ಆರೋಪಿಸಲಾಗಿತ್ತು. ಅವರ ವಿರುದ್ಧ ಕ್ರಿಮಿನಲ್ ಬಲಪ್ರಯೋಗ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಸಿಂಗ್ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು. ಆದರೆ, ಸುಪ್ರೀಂ ಕೋರ್ಟ್ ಈ ತೀರ್ಪನ್ನು ತಿರಸ್ಕರಿಸಿದೆ.
ಪ್ರಕರಣ ಮುಕ್ತಾಯ
ಜಾರ್ಖಂಡ್ ಹೈಕೋರ್ಟ್‌ನ ಆದೇಶವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಆರೋಪಿಯು ಶಾಂತಿ ಭಂಗ ಅಥವಾ ಪ್ರಚೋದನಾಕಾರಕ ಕೃತ್ಯವನ್ನು ಎಸಗಿದ ಪ್ರಬಲ ಪುರಾವೆಗಳಿಲ್ಲ ಎಂದು ತೀರ್ಮಾನಿಸಿದೆ.
ಆರೋಪ ಸಾಬೀತುಪಡಿಸಲು ಹಲ್ಲೆ ಅಥವಾ ಬಲಪ್ರಯೋಗಕ್ಕೆ ಸಂಬಂಧಿಸಿದ ಯಾವುದೇ ಪುರಾವೆ ಇಲ್ಲ ಎಂದು ಉನ್ನತ ನ್ಯಾಯಾಲಯ ಹೇಳಿದ್ದು, ಸಿಂಗ್ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿದೆ.