ಅಮರಾವತಿ: ಮನುಷ್ಯ ಎಷ್ಟೇ ಮುಂದುವರಿದರೂ ಮೌಢ್ಯ ಎಂಬುದು ಆತನನ್ನು ಬಿಟ್ಟು ಹೋಗುವುದಿಲ್ಲ. ಬೇರೆಯವರು ಹೇಳುವುದನ್ನು ಕೇಳಿ ಅಥವಾ ತನ್ನದೇ ತಪ್ಪು ಕಲ್ಪನೆಯ ಮೂಲಕ ಮತ್ತೆ ಮತ್ತೆ ಮೌಢ್ಯದ ಹಾಳುಬಾವಿಗೆ ಬೀಳುತ್ತಲೇ ಇರುತ್ತಾರೆ. ಇದರಿಂದ ಆಗುವ ಪರಿಣಾಮ ಘೋರ ಹಾಗೂ ಅತಿಕ್ರೂರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಇಂಥದ್ದೊಂದು ಘಟನೆ ಮಹಾರಾಷ್ಟ್ರದ ಅಮರಾವತಿಯಲ್ಲಿ ನಡೆದಿದೆ.
ಕೇವಲ 22 ದಿನಗಳ ಹಿಂದೆ ಜನಿಸಿದ್ದ ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎಂದು ಅದರ ಪೋಷಕರು ಕಾದ ಕಬ್ಬಿಣದಿಂದ 65 ಬಾರಿ ಬರೆ ಎಳೆದಿದ್ದಾರೆ. ಅಮರಾವತಿಯ ಚಿಖಲ್ದಾರಾ ತಾಲೂಕಿನ ಸೀಮೋರಿ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ನಡೆದಿದ್ದು. ಹಿರಿಯ ಕುಕೃತ್ಯಕ್ಕೆ ಮಗು ಗಂಭೀರ ಸ್ಥಿತಿ ತಲುಪಿದೆ. ಮಗುವನ್ನು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ಅಮರಾವತಿ ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿಶುವು ಜನ್ಮಜಾತ ಹೃದಯ ದೋಷದಿಂದ ಬಳಲುತ್ತಿದ್ದು, ಉಸಿರಾಟದ ತೊಂದರೆಗಳಿಗೆ ಕಾರಣವಾಗಿದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ. ಆದರೆ, ಪೋಷಕರು ಮೂರ್ಖರ ಮಾತು ನಂಬಿ ಕಾದ ಕಬ್ಬಿಣದಿಂದಲೇ ಬರೆ ಎಳೆದಿದ್ದು, ಅದಕ್ಕೆ ಪ್ರಾಣಾಪಾಯ ತಂದಿಟ್ಟಿದ್ದಾರೆ.
ಈ ಆತಂಕಕಾರಿ ಘಟನೆಯು ಬುಡಕಟ್ಟು ಪ್ರಾಬಲ್ಯದ ಮೆಲ್ಘಾಟ್ ಪ್ರದೇಶದಲ್ಲಿ ಸಂಭವಿಸಿದೆ. ಈ ಸಮುದಾಯದಲ್ಲಿ ಇನ್ನೂ ಮೂಢನಂಬಿಕೆಗಳು ಮತ್ತು ಅಪಾಯಕಾರಿ ಅಭ್ಯಾಸಗಳಿವೆ ಎಂದು ಹೇಳಲಾಗಿದೆ.
ಮಗು ಈಗ ಆಸ್ಪತ್ರೆ ಸೇರಿದ್ದು ಚಿಕಿತ್ಸೆ ಆರಂಭಿಸಲಾಗಿದೆ. ಮಗುವಿನ ಹೃದಯ ಬಡಿತದ ಏರುಪೇರಿನ 2 ಡಿ ಎಕೋ ಪರೀಕ್ಷೆಯ ಅಗತ್ಯವಿದೆ. ದುರದೃಷ್ಟವಶಾತ್, ಈ ಸೌಲಭ್ಯವು ಆಸ್ಪತ್ರೆಯಲ್ಲಿ ಇನ್ನೂ ಲಭ್ಯವಿಲ್ಲ ಆದರೆ ಶೀಘ್ರದಲ್ಲೇ ಅದನ್ನು ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಮಗುವಿನ ಸ್ಥಿತಿ ಗಂಭೀರವಾಗಿದ್ದರೆ, ವಿಶೇಷ ಚಿಕಿತ್ಸೆಗಾಗಿ ನಾಗ್ಪುರಕ್ಕೆ ಕಳುಹಿಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಲಭ್ಯವಿರುವ ವೈಜ್ಞಾನಿಕ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
