ವಾಷಿಂಗ್ಟನ್: ಕೇವಲ ಒಂಬತ್ತು ದಿನಗಳ ಅಧ್ಯಯನಕ್ಕಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನೀತಾ ವಿಲಿಯಮ್ಸ್, 9 ತಿಂಗಳು ಅಲ್ಲೇ ಕಳೆದು, ಕೊನೆಗೂ ಭೂಮಿಗೆ ಆಗಮಿಸಿದ್ದಾರೆ. ಜೀರೋ ಗ್ರ್ಯಾವಿಟಿಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳು ಕಳೆದಿರುವ ಸುನೀತಾ ವಿಲಿಯಮ್ಸ್ (Sunita Williams) ಸೇರಿ ಎಲ್ಲ ಗಗನಯಾತ್ರಿಗಳಿಗೆ ಮುಂದಿನ 45 ದಿನಗಳವರೆಗೆ ಅಗ್ನಿಪರೀಕ್ಷೆ ಕಾದಿದೆ. ಅವರ ಆರೋಗ್ಯದ ಮೇಲೆ ಸತತ ನಿಗಾ ಇರಿಸಲಾಗುತ್ತಿದ್ದು, ಸಾಮಾನ್ಯ ಜೀವನಕ್ಕೆ ಮರಳಲು ಹಲವು ಸವಾಲುಗಳು ಎದುರಾಗಿವೆ.
ಸಾಮಾನ್ಯವಾಗಿ ಬಾಹ್ಯಾಕಾಶದಿಂದ ಬರುವ ಗಗನಯಾತ್ರಿಗಳಿಗೆ 45 ದಿನಗಳ ರಿಕವರಿ ಪ್ರೋಗ್ರಾಂ ಇರುತ್ತದೆ. ಮಾರ್ಚ್ 19ರಿಂದ 45 ದಿನಗಳ ಪುನರ್ವಸತಿ (Rehabilitation) ಕಾರ್ಯಕ್ರಮಕ್ಕೆ ನಾಸಾ ಈಗಾಗಲೇ ಸಿದ್ಧವಾಗಿದೆ. ನೌಕಾಪಡೆಯ ಸಿಬ್ಬಂದಿ, ನಾಸಾ ವಿಜ್ಞಾನಿಗಳು, ವೈದ್ಯರು ಸೇರಿ 500ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗಿಯಾಗುತ್ತಾರೆ. ಸುನೀತಾ ವಿಲಿಯಮ್ಸ್ ಸೇರಿ ಬಾಹ್ಯಾಕಾಶದಲ್ಲಿದ್ದ ಎಲ್ಲ ನಾಲ್ವರೂ ಗಗನಯಾತ್ರಿಗಳ ಆರೋಗ್ಯದ ಮೇಲೆ ಇವರು ನಿಗಾ ಇರಿಸುತ್ತಾರೆ.
ಹಲವು ಆರೋಗ್ಯ ಸಮಸ್ಯೆಗಳು
ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಗಳಿಗೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ಸಂಪೂರ್ಣವಾಗಿ ತಮ್ಮ ಕಾಲಿನ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಭೂಮಿಗೆ ಬಂದಿರುವ ಅವರಿಗೆ ಬೇಬಿ ಫೀಟ್ ಸಮಸ್ಯೆ ಎಂದರೆ, ನೆಲದ ಮೇಲೆ ಕಾಲು ಊರಲೂ ಅವರಿಗೆ ಆಗುವುದಿಲ್ಲ. ಮೂಳೆ ಸವೆತದಿಂದ ಅವರ ಆರೋಗ್ಯವು ಇನ್ನಷ್ಟು ಹದಗೆಟ್ಟಿರುತ್ತದೆ. ಹಾಗಾಗಿ, ಅವರನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸಿ ನಿಗಾ ವಹಿಸಲಾಗುತ್ತದೆ.
ಸುಮಾರು 9 ತಿಂಗಳವರೆಗೆ ಬಾಹ್ಯಾಕಾಶದಲ್ಲೇ ಇದ್ದ ಕಾರಣ ಗಗನಯಾತ್ರಿಗಳ ದೇಹದಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಸೇರಿರುವ ಸಾಧ್ಯತೆಗಳು ಇರುತ್ತವೆ. ಇದರ ಕುರಿತು ವೈದ್ಯರು ಹೆಚ್ಚಿನ ತಪಾಸಣೆ ನಡೆಸಲಿದ್ದಾರೆ. ಇನ್ನು, ಮೂರ್ಛೆ ಹೋಗುವುದು, ವಾಕರಿಕೆ, ವಾಂತಿ ಸೇರಿ ಸಣ್ಣಪುಟ್ಟ ಸಮಸ್ಯೆಗಳೂ ಅವರಿಗೆ ಎದುರಾಗುತ್ತಿವೆ. ಕೆಲವು ದೀರ್ಘಕಾಲಿನ ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು ಎನ್ನಲಾಗುತ್ತಿದೆ. ಹಾಗಾಗಿ, ಮುಂದಿನ 45 ದಿನಗಳು ಗಗನಯಾತ್ರಿಗಳಿಗೆ ಅಗ್ನಿಪರೀಕ್ಷೆಯೇ ಆಗಿವೆ.