ನವದೆಹಲಿ: ನಾಸಾ ಗಗನಯಾನಿ ಸುನೀತಾ ವಿಲಿಯಮ್ಸ್(Sunita Williams) ಮತ್ತು ಬುಚ್ ವಿಲ್ಮೋರ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ 9 ತಿಂಗಳ ವಾಸ್ತವ್ಯ ಮುಗಿಸಿ ಕೊನೆಗೂ ಭೂಮಿಗೆ ಮರಳಿದ್ದಾರೆ. ಅವರ ಆಗಮನದ ಬೆನ್ನಲ್ಲೇ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಇಬ್ಬರು ಗಗನಯಾನಿಗಳ ಸಾಹಸದ ಕುರಿತು ಕೆಲವೊಂದು ಆಸಕ್ತಿದಾಯಕ ಮತ್ತು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದೆ. ಆ ಸಂಗತಿಗಳ ಬಗ್ಗೆ ಮಾಹಿತಿ ಇಲ್ಲಿದೆ:
- ಸುನೀತಾ ವಿಲಿಯಮ್ಸ್ ಅವರು ಅತಿ ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆದಿರುವ ಅಮೆರಿಕದ ಎರಡನೇ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
- ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಒಟ್ಟು 12,13,47,491 (12.13 ಕೋಟಿ) ಮೈಲುಗಳಷ್ಟು ಪ್ರಯಾಣಿಸಿದ್ದಾರೆ. ಬಾಹ್ಯಾಕಾಶದಲ್ಲಿ 286 ದಿನಗಳನ್ನು ಕಳೆದಿದ್ದಾರೆ ಮತ್ತು ಭೂಮಿಗೆ 4,576 ಬಾರಿ ಸುತ್ತು ಬಂದಿದ್ದಾರೆ.
- ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಪ್ರತಿ 6 ತಿಂಗಳಿಗೊಮ್ಮೆ ಗಗನಯಾನಿಗಳನ್ನು ರೊಟೇಷನ್ ಆಧಾರದಲ್ಲಿ ಬದಲಿಸಲಾಗುತ್ತದೆ. ವಿಲ್ಮೋರ್ ಮತ್ತು ವಿಲಿಯಮ್ಸ್ ಅವರ 286 ದಿನಗಳ ವಾಸ್ತವ್ಯವು, ಈ ರೊಟೇಶನ್ ಅವಧಿ ಮೀರಿದರೂ, ಇದು ಏಕ-ಮಿಷನ್ ಅವಧಿಯ ಅಮೆರಿಕದ ದಾಖಲೆಗಳಲ್ಲಿ ಆರನೇ ಸ್ಥಾನದಲ್ಲಿದೆ.
- ಏತನ್ಮಧ್ಯೆ, ಕ್ರ್ಯೂ-9 ನೌಕೆಯಲ್ಲಿ ಬಂದಿರುವ ಹೇಗ್ ಮತ್ತು ಗೋರ್ಬುನೊವ್ ಅವರು ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 7,25,53,920 ಮೈಲುಗಳಷ್ಟು ಪ್ರಯಾಣಿಸಿದ್ದಾರೆ. ಇವರು ಬಾಹ್ಯಾಕಾಶದಲ್ಲಿ 171 ದಿನಗಳನ್ನು ಕಳೆದಿದ್ದು, ಭೂಮಿಯ ಸುತ್ತ 2,736 ಕಕ್ಷೆಗಳನ್ನು ಪೂರ್ಣಗೊಳಿಸಿದ್ದಾರೆ.
- ಸುನೀತಾ ವಿಲಿಯಮ್ಸ್ ಅವರು ಒಟ್ಟು 3 ಬಾರಿ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿದ್ದು, ಒಟ್ಟಾರೆ 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಬುಚ್ ವಿಲ್ಮೋರ್ 3 ಬಾರಿ ಹೋಗಿದ್ದು, 464 ದಿನಗಳನ್ನು ಕಳೆದಿದ್ದಾರೆ. ಹೇಗ್ ತಮ್ಮ 2 ಕಾರ್ಯಾಚರಣೆಗಳಲ್ಲಿ 374 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. ಇನ್ನು ಗೋರ್ಬುನೋವ್ ಅವರಿಗೆ ಇದು ಮೊದಲ ಬಾಹ್ಯಾಕಾಶ ಯಾನವಾಗಿತ್ತು.
- ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕ್ರ್ಯೂ-9 ಒಟ್ಟಾರೆಯಾಗಿ 150 ಕ್ಕೂ ಹೆಚ್ಚು ವಿಶಿಷ್ಟ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದೆ. ಒಟ್ಟು 900 ಗಂಟೆಗಳ ಸಂಶೋಧನೆ ಕೈಗೊಂಡಿದೆ.
- ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರ ಸುದೀರ್ಘ 9 ತಿಂಗಳ ವಾಸ್ತವ್ಯದ ವೇಳೆ ಭೂಮಿಯಿಂದ ಒಟ್ಟು 8 ಬೇರೆ ಬೇರೆ ಅಂತರಿಕ್ಷ ವಾಹನಗಳು ಐಎಸ್‌ಎಸ್‌ಗೆ ಬಂದು ಹೋಗಿವೆ.
- ಸುನೀತಾ ವಿಲಿಯಮ್ಸ್ ಅವರು 9 ತಿಂಗಳಲ್ಲಿ 2 ಬಾಹ್ಯಾಕಾಶ ನಡಿಗೆಗಳನ್ನು ಪೂರೈಸಿದ್ದಾರೆ. ಬುಚ್ ವಿಲ್ಮೋರ್ ಮತ್ತು ನಿಕ್ ಹೇಗ್ ತಲಾ 1 ಬಾಹ್ಯಾಕಾಶ ನಡಿಗೆ ನಡೆಸಿದ್ದಾರೆ.
- ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಒಟ್ಟು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಪೂರ್ಣಗೊಳಿಸಿದ್ದಾರೆ. ಈ ಮೂಲಕ ನಿಲ್ದಾಣದ ಹೊರಗೆ ಇಷ್ಟು ಸಮಯ ಕಳೆದಿರುವ ಮೊದಲ ಮಹಿಳಾ ಗಗನಯಾತ್ರಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಸಾರ್ವಕಾಲಿಕ ಬಾಹ್ಯಾಕಾಶ ನಡಿಗೆ ಅವಧಿಯ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
- ಕ್ರ್ಯೂ -9 ಮಿಷನ್ ಎನ್ನುವುದು ಫ್ರೀಡಂ ಎಂಬ ಹೆಸರಿನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ನಾಲ್ಕನೇ ಹಾರಾಟವಾಗಿದೆ.