ಬೆಂಗಳೂರು: ಕೊನೆಗೂ ಇಡೀ ಮನುಕುಲವೇ ಸಮಾಧಾನದಿಂದ ನಿಟ್ಟುಸಿರು ಬಿಟ್ಟಿದೆ. ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಾಣದಲ್ಲಿ ಸಿಲುಕಿ, ಭೂಮಿಗೆ ಮರಳುವುದೆಂದು ಎಂಬ ಅನಿಶ್ಚಿತತೆಯಿಂದ ಒದ್ದಾಡುತ್ತಿದ್ದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇಂದು ಮುಂಜಾನೆ ಸೂರ್ಯ ಉದಯಿಸುವುದಕ್ಕೂ ಮುನ್ನವೇ ಭೂಮಿಯ ಮಡಿಲು ಸೇರಿದ್ದಾರೆ. ಈ ಮೂಲಕ ಅವರ ಆಗಮನಕ್ಕಾಗಿ ಕಾಯುತ್ತಿದ್ದ ಇಡೀ ಜಗತ್ತು ನಿರಾಳತೆ ಅನುಭವಿಸಿದೆ.
ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್, ಅಮೆರಿಕ ಮೂಲದ ಬುಚ್ ವಿಲ್ಮೋರ್ ಹಾಗೂ ಇತರೆ ಇಬ್ಬರು ಗಗನಯಾತ್ರಿಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಕ್ಯಾಾಪ್ಸೂಲ್ ಇಂದು ಬೆಳಗಿನ ಜಾವ ಫ್ಲೋರಿಡಾ ಕರಾವಳಿಯನ್ನು ತಲುಪಿದೆ.
ಕ್ಯಾಪ್ಸೂಲ್ ಬಂದು ಸಮುದ್ರದಲ್ಲಿ ಇಳಿಯುತ್ತಿದ್ದಂತೆ ಅಲ್ಲಿ ಮೊದಲೇ ಸನ್ನದ್ಧರಾಗಿದ್ದ ಸಿಬ್ಬಂದಿಯು ಅದನ್ನು ಒಂದು ಹಡಗಿಗೆ ವರ್ಗಾಯಿಸಿದ್ದಾರೆ. ಆ ಹಡಗಿನಲ್ಲಿ ಒಂದು ಹಂತದ ತಪಾಸಣೆ ಮುಗಿಸಿದ ಬಳಿಕ, ಗಗನಯಾತ್ರಿಗಳನ್ನು ಹ್ಯೂಸ್ಟನ್ನಲ್ಲಿರುವ ನಾಸಾದ ಜಾನ್ಸನ್ ಸ್ಪೇಸ್ ಸೆಂಟರ್ನ ಆಸ್ಪತ್ರೆೆಗೆ ಒಯ್ಯಲಾಗಿದೆ. ಅಲ್ಲಿ ಸುನೀತಾ ಮತ್ತು ವಿಲ್ಮೋರ್ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ, ಚಿಕಿತ್ಸೆ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಮಿಷನ್ ಸ್ಪೇಸ್ಎಕ್ಸ್ ಮತ್ತು ನಾಸಾ ನಡುವಿನ ವಿಶೇಷ ಸಾಧನೆಯಾಗಿದೆ. ಡ್ರ್ಯಾಗನ್ ಕ್ಯಾಪ್ಸೂಲ್ ಅಮೆರಿಕದದಿಂದ ಖಗೋಳ ವಿಜ್ಞಾನಿಗಳನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಮತ್ತು ಹಿಂತಿರುಗಿಸುವ ಪರಿಪೂರ್ಣ ಸಾಮರ್ಥ್ಯ ಪಡೆದುಕೊಂಡಿದೆ. 2011ರಲ್ಲಿ ನಾಸಾ ಸ್ಪೇಸ್ ಶಟಲ್ ಯೋಜನೆ ನಿಲ್ಲಿಸಿದ ನಂತರ, ಅಮೆರಿಕನ್ ಖಗೋಳವಿಜ್ಞಾನಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲು ರಷ್ಯನ್ ಸೊಯುಜ್ ಕ್ಯಾಪ್ಸೂಲ್ಗಳನ್ನು ಅವಲಂಬಿಸಬೇಕಾಗಿತ್ತು. ಸ್ಪೇಸ್ಎಕ್ಸ್ನ ಯಶಸ್ಸು ರಷ್ಯಾ ಅವಲಂಬನೆಯನ್ನು ಕಡಿಮೆ ಮಾಡಿದೆ.
ನಾಸಾ ಮತ್ತು ಸ್ಪೇಸ್ಎಕ್ಸ್ ಮುಂದಿನ ಮಿಷನ್ಗಳಿಗೆ ಸಿದ್ಧತೆ ನಡೆಸಲಿವೆ. ಡ್ರ್ಯಾಗನ್ ಕ್ಯಾಪ್ಸೂಲ್ಗಳು ಭವಿಷ್ಯದಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಹೆಚ್ಚಿನ ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಸಾಗಿಸಲು ಬಳಕೆಯಾಗಲಿವೆ. ಇದು ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಅಧ್ಯಾಯ ಎನಿಸಿಕೊಳ್ಳಲಿದೆ. ಈ ಮಿಷನ್ನ ಯಶಸ್ಸು ಬಾಹ್ಯಾಕಾಶ ಸಂಶೋಧನೆಯಲ್ಲಿ ಮಾನವ ಸಾಮರ್ಥ್ಯ ಮತ್ತು ತಾಂತ್ರಿಕ ಪ್ರಗತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.