ವಾಷಿಂಗ್ಟನ್: ಸುದೀರ್ಘ 9 ತಿಂಗಳ ಕಾಲ ತಮ್ಮನ್ನು ಸುರಕ್ಷಿತವಾಗಿ ಮಡಿಲಲ್ಲಿಟ್ಟುಕೊಂಡಿದ್ದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಮೋರ್ ಮಂಗಳವಾರ ವಿದಾಯ ಹೇಳಿದ್ದಾರೆ. ಸ್ಪೇಸ್ ಎಕ್ಸ್ ಬಾಹ್ಯಾಕಾಶ ನೌಕೆಯ ಮೂಲಕ ಈ ಇಬ್ಬರು ಗಗನಯಾತ್ರಿಗಳು ಭೂಮಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ 10.35ಕ್ಕೆ ಸುನೀತಾ ಮತ್ತು ವಿಲ್ಮೋರ್ ಐಎಸ್ಎಸ್ ನಿಂದ ಹೊರಟಿದ್ದಾರೆ. ಬರೋಬ್ಬರಿ 17 ಗಂಟೆಗಳ ಪ್ರಯಾಣದ ಬಳಿಕ ಬುಧವಾರ ಬೆಳಗಿನ ಜಾವ 3.27ಕ್ಕೆ ಇವರಿಬ್ಬರನ್ನು ಹೊತ್ತ ಕ್ಯಾಪ್ಸ್ಯೂಲ್ ಭೂಮಿಯನ್ನು ಸ್ಪರ್ಶಿಸಲಿದೆ. ಈ ಹಿಂದಿನ ಯೋಜನೆಯಂತೆ ಅವರ ಪ್ರಯಾಣ ಬುಧವಾರ ಆರಂಭವಾಗಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದ ಸಾಧ್ಯತೆ ಗೋಚರಿಸಿದ ಹಿನ್ನೆಲೆಯಲ್ಲಿ ಪ್ರಯಾಣವನ್ನು ನಿಗದಿಗಿಂತ ಮೊದಲೇ ಆರಂಭಿಸಲಾಗಿದೆ ಎಂದು ನಾಸಾ ಹೇಳಿದೆ.
ನಾಲ್ವರು ಸದಸ್ಯರಿರುವ ನೌಕೆಯು ಬುಧವಾರ ಮುಂಜಾನೆ 3:27ಕ್ಕೆ(ಅಮೆರಿಕ ಕಾಲಮಾನ ಮಂಗಳವಾರ ಸಂಜೆ 5:57ಕ್ಕೆ) ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಇಳಿಯುವ ನಿರೀಕ್ಷೆಯಿದೆ. ಲ್ಯಾಂಡಿಂಗ್ ನ ನಿಖರವಾದ ಸ್ಥಳವು ಸ್ಥಳೀಯ ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ ಎಂದು ಹೇಳಲಾಗಿದೆ.
ಕೊನೆಯ ಫೋಟೋಗೆ ಪೋಸ್:
ಭೂಮಿಗೆ ಹೊರಡುವ ಮುನ್ನ ಸುನೀತಾ ಮತ್ತು ವಿಲ್ಮೋರ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಇತರೆ ಸಿಬ್ಬಂದಿಯೊಂದಿಗೆ ಫೋಟೋಗೆ ಪೋಸ್ ನೀಡಿದರು. ಎಲ್ಲರನ್ನೂ ಆಲಿಂಗಿಸಿಕೊಂಡು ವಿದಾಯ ಹೇಳಿದರು. ಈ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
286 ದಿನ ಐಎಸ್ಎಸ್‍ನಲ್ಲೇ ಕಳೆದರು:
ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕಳೆದ ವರ್ಷ ಜೂನ್ನಲ್ಲಿ 8 ದಿನಗಳ ಕಾರ್ಯಾಚರಣೆಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸೂಲ್ ಮೂಲಕ ಹೋಗಿ ಅದರಲ್ಲೇ ವಾಪಸಾಗಬೇಕಾಗಿತ್ತು. ಆದರೆ, ಆ ನೌಕೆಯ ಪ್ರೊಪಲ್ಷನ್ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಂಡು ಬಂದ ಕಾರಣ ಅವರು ಅಲ್ಲೇ ಉಳಿಯಬೇಕಾಯಿತು. ದುರಸ್ತಿ ಅಸಾಧ್ಯವಾದ ಹಿನ್ನೆಲೆಯಲ್ಲಿ ಗಗನಯಾತ್ರಿಗಳನ್ನು ಅಲ್ಲೇ ಬಿಟ್ಟು ಸ್ಟಾರ್ ಲೈನರ್ ಭೂಮಿಗೆ ಮರಳಿತು. ಹೀಗಾಗಿ, ಅಂದಿನಿಂದ ಇಂದಿನವರೆಗೂ ಅಂದರೆ 286 ದಿನಗಳ ಕಾಲ ಸುನೀತಾ ಹಾಗೂ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಕಳೆದಿದ್ದಾರೆ. ಆದರೆ, ಸ್ವಲ್ಪವೂ ವಿಚಲಿತರಾಗದ ಅವರು ಪೂರ್ಣ ಪ್ರಮಾಣದ ನಿಲ್ದಾಣದ ಸಿಬ್ಬಂದಿಯಾಗಿ ಪರಿವರ್ತನೆಗೊಂಡಿದ್ದಲ್ಲದೆ, ಅಲ್ಲಿ ಹಲವು ಪ್ರಯೋಗಗಳನ್ನು ನಡೆಸುತ್ತಾ, ಉಪಕರಣಗಳನ್ನು ಸರಿಪಡಿಸುತ್ತಾ ಕಾಲ ಕಳೆದಿದ್ದಾರೆ. ಅಲ್ಲದೇ ಜತೆಯಾಗಿ ಬಾಹ್ಯಾಕಾಶ ನಡಿಗೆಯನ್ನೂ ಕೈಗೊಂಡಿದ್ದಾರೆ. ಸುದೀರ್ಘ 62 ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡುವ ಮೂಲಕ ಸುನೀತಾ ವಿಲಿಯಮ್ಸ್ ಹೊಸ ದಾಖಲೆಯನ್ನೂ ನಿರ್ಮಿಸಿದ್ದಾರೆ. ಮಹಿಳಾ ಗಗನಯಾತ್ರಿಗಳ ಪೈಕಿ ಈ ಸಾಧನೆಗೈದ ಅಗ್ರಗಣ್ಯರೆನಿಸಿಕೊಂಡಿದ್ದಾರೆ.