ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಶನಿವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ದ್ವೇಷ ಹರಡುವ ಭಾಷಣ ಮಾಡಿದ್ದಾರೆಂಬ ಕಾರಣಕ್ಕೆ ಪೊಲೀಸರು ಸುಮೋಟೋ ಕೇಸು ದಾಖಲಿಸಿದ್ದಾರೆ.
ಮಲ್ಪೆ ಬಂದರಿನಲ್ಲಿ ಇತ್ತೀಚೆಗಷ್ಟೇ ಮೀನು ಕದ್ದಿದ್ದಾರೆಂಬ ಕಾರಣಕ್ಕ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಅಲ್ಲದೇ, ಐವರು ಮೀನುಗಾರರ ಮೇಲೆ ಪೊಲೀಸರು ಅಟ್ರಾಸಿಟಿ ಕೇಸ್ ಹಾಕಿದ್ದರು.
ಹೀಗಾಗಿ ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಮಲ್ಪೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವ ಪ್ರಮೋದ್, ಮಹಿಳೆಯನ್ನು ಕಟ್ಟಿಹಾಕಿ ಹೊಡೆದಿದ್ದನ್ನು ಸಮರ್ಥಿಸಿಕೊಂಡಿದ್ದರು. ಕಳ್ಳರನ್ನು ಕಟ್ಟಿ ಹಾಕಲೇಬೇಕು. ಮಚ್ಚಿನಲ್ಲಿ, ಖಡ್ಗದಲ್ಲಿ, ತಲೆವಾರಿನಲ್ಲಿ ಹೊಡೆದಿದ್ದಾ? ಎರಡು ಕೆನ್ನೆಗೆ ಬಾರಿಸಿದ್ದಾರೆ ಎಂದು ಪ್ರಶ್ನಿಸಿದ್ದರು. ಹೀಗಾಗಿ ಮಾಜಿ ಸಚಿವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ದ್ವೇಷ ಭಾವನೆಯಿಂದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು, ಬಿಎನ್ ಎಸ್ 57, 191 (1)192 ನಂತೆ ಪ್ರಕರಣ ದಾಖಲಿಸಲಾಗಿದೆ.