ನವದೆಹಲಿ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕ್ರಿಕೆಟಿಗ, ರಾಜಕಾರಣಿ ಮೊಹಮ್ಮದ್ ಅಜರುದ್ದೀನ್ ಗೆ ಇಡಿಯಿಂದ ಸಮನ್ಸ್ ಜಾರಿಯಾಗಿದೆ.
ಎಚ್ ಸಿಎ ಮಾಜಿ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಅವರ ಅಧಿಕಾರಾವಧಿಯಲ್ಲಿ ಹಣ ದುರುಪಯೋಗ ಆಗಿರುವ ಆರೋಪ ಕೇಲಿ ಬಂದಿದೆ. ಆದರೆ, ವಿಚಾರಣೆಗೆ ಹಾಜರಾಗಲು ಮೊಹಮ್ಮದ್ ಅಜರುದ್ದೀನ್ ಸಮಯಾವಕಾಶ ಕೇಳಿದ್ದಾರೆ ಎಂದು ಸುದ್ದಿಯಾಗಿದೆ.
ಹೈದರಾಬಾದ್ ನ ಉಪ್ಪಲ್ ನಲ್ಲಿರುವ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂಗಾಗಿ ಡೀಸೆಲ್ ಜನರೇಟರ್, ಅಗ್ನಿಶಾಮಕ ವ್ಯವಸ್ಥೆಗಳು ಮತ್ತು ಕ್ಯಾನೋಪಿಗಳ ಖರೀದಿಗೆ 20 ಕೋಟಿ ರೂ. ಹಣ ಬಿಡುಗಡೆಯಾಗಿತ್ತು. ಆದರೆ, ಈ ಹಣ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.
2023ರಲ್ಲಿ ತೆಲಂಗಾಣದ ಒಂಬತ್ತು ಸ್ಥಳಗಳಲ್ಲಿ ಇಡಿಯಿಂದ 9 ಕಡೆ ದಾಳಿ ನಡೆದಿತ್ತು. ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಗದ್ದಂ ವಿನೋದ್, ಶಿವಲಾಲ್ ಯಾದವ್ ಮತ್ತು ಅರ್ಷದ್ ಅಯೂಬ್ ಅವರ ನಿವಾಸಗಳಲ್ಲಿ ಶೋಧ ನಡೆಸಲಾಗಿತ್ತು. ಎಸ್ ಎಸ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಆವರಣ ಮತ್ತು ಅದರ ಎಂಡಿ, ಸತ್ಯನಾರಾಯಣ ಅವರ ವಸತಿಯಲ್ಲಿಯೂ ಶೋಧ ಕಾರ್ಯ ನಡೆದಿತ್ತು. ಈ ವೇಳೆ ದಾಖಲೆಗಳು ಮತ್ತು ಲೆಕ್ಕಕ್ಕೆ ಸಿಗದ 10.39 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಹೈದರಾಬಾದ್‌ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿರುವ ಮೂರು ಎಫ್‌ಐಆರ್‌ಗಳು ಮತ್ತು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ನಿಧಿಯನ್ನು ಕ್ರಿಮಿನಲ್ ದುರುಪಯೋಗಕ್ಕೆ ಸಂಬಂಧಿಸಿದಂತೆ ಎಸಿಬಿ ಸಲ್ಲಿಸಿದ ಚಾರ್ಜ್ ಶೀಟ್ ಗಳ ಆಧಾರದ ಮೇಲೆ ಇಡಿ ತನಿಖೆಯನ್ನು ಪ್ರಾರಂಭಿಸಿದೆ.