ಮುಂಬೈ: ಹಲವು ಮಂದಿ ಕೋಟ್ಯಂತರ ರೂಪಾಯಿ ವಂಚಿಸಿ ಈಗ ಕಂಬಿ ಎಣಿಸುತ್ತಿರುವ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ತಮ್ಮ ಪ್ರೇಯಸಿ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ಗೆ ಲವ್ ಲೆಟರ್‌ಗಳನ್ನು ಬರೆಯುವ ಮೂಲಕ ಪದೇ ಪದೇ ಸುದ್ದಿಯಾಗುತ್ತಾರೆ. ಆದರೆ, ಈ ಬಾರಿ ಪ್ರೇಮಿಗಳ ದಿನದಂದು ಸುಕೇಶ್ ಅವರು ಜಾಕ್ವೆಲಿನ್‌ಗೆ ರೊಮ್ಯಾಂಟಿಕ್ ಆಗಿ ಪ್ರೇಮ ಪತ್ರ ಬರೆಯುವುದರ ಜೊತೆಗೆ ಖಾಸಗಿ ವಿಮಾನವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ!

ಹೌದು, ಇದನ್ನು ನಂಬಲೇಬೇಕು. ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ಶುಕ್ರವಾರ ಜಾಕ್ವೆಲಿನ್‌ಗೆ ಪತ್ರ ಬರೆದಿರುವ ಸುಕೇಶ್, ತಾನು ಪ್ರೈವೇಟ್ ಜೆಟ್ ಅನ್ನು ಗಿಫ್ಟ್ ಕೊಟ್ಟಿರುವ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಅಲ್ಲದೇ, ಆ ಖಾಸಗಿ ವಿಮಾನದಲ್ಲಿ ಜಾಕ್ವೆಲಿನ್ ಅವರ ಹೆಸರಿನ ಇನೀಷಿಯಲ್‌ಗಳಿದ್ದು, ಆಕೆಯ ಜನ್ಮ ದಿನಾಂಕವನ್ನೇ ವಿಮಾನದ ರಿಜಿಸ್ಟ್ರೇಷನ್ ನಂಬರ್ ಆಗಿ ಬಳಸಿರುವುದಾಗಿಯೂ ತಿಳಿಸಿದ್ದಾರೆ.

ಬೇಬಿ, ನೀನು ಶೂಟಿಂಗ್‌ಗಾಗಿ ಜಗತ್ತಿನಾದ್ಯಂತ ಸಂಚರಿಸಬೇಕಾಗುತ್ತದೆ. ಇನ್ನು ಮುಂದೆ ನಿನ್ನ ಪ್ರಯಾಣ ಸುಖಕರವಾಗಿರಲಿದೆ. ಆರಾಮವಾಗಿ ನಾನು ಕೊಟ್ಟಿರುವ ವಿಮಾನದಲ್ಲಿ ಸಂಚರಿಸಬಹುದು ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾರೆ. ಅಲ್ಲದೆ, ಈ ಪ್ರೇಮಿಗಳ ದಿನದಂದು ನನಗಿರುವುದು ಒಂದೇ ಆಸೆ. ನನಗೇನಾದರೂ ಪುನರ್ಜನ್ಮವಿದ್ದರೆ, ನಾನು ನಿನ್ನ ಹೃದಯವಾಗಿ ಹುಟ್ಟುತ್ತೇನೆ. ಆ ಮೂಲಕ ನಿನ್ನೊಳಗಿನ ಬಡಿತವಾಗಿರುತ್ತೇನೆ. ನನ್ನ ಬೊಮ್ಮ, ನಿನ್ನಂಥ ಅತ್ಯಂತ ಸುಂದರ ಮಹಿಳೆಯನ್ನು ಪ್ರೇಮಿಯಾಗಿ ಪಡೆದಿರುವ ನಾನು ಈ ಭೂಮಿಯ ಅತ್ಯಂತ ಅದೃಷ್ಟವಂತ ವ್ಯಕ್ತಿ ಎಂದೂ ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ಬರೆದಿದ್ದಾರೆ.
200 ಕೋಟಿ ರೂ. ವಸೂಲಿ ಮತ್ತು ವಂಚನೆ ಪ್ರಕರಣ ಸಂಬಂಧ ಸುಕೇಶ್ ಪ್ರಸ್ತುತ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾರೆ.