ಬೆಂಗಳೂರು: ಹೆಣ್ಣುಮಕ್ಕಳು ಹುಟ್ಟಿದ ತಕ್ಷಣ ಪೋಷಕರು ಆಕೆಯ ಶಿಕ್ಷಣ, ಮದುವೆ ಬಗ್ಗೆ ಯೋಚನೆ ಮಾಡುವುದು ಸಹಜ. ಇದನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಸರ್ಕಾರವು ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೆ ತಂದಿದೆ. ಯೋಜನೆಯಲ್ಲಿ ನೀವು ತಿಂಗಳಿಗೆ 1 ಸಾವಿರ ರೂಪಾಯಿ ಉಳಿಸಿದರೂ ಸಾಕು, ಮಗಳಿಗೆ 21 ವರ್ಷ ತುಂಬುವಷ್ಟರಲ್ಲಿ ಒಳ್ಳೆಯ ಮೊತ್ತ ಜಮೆಯಾಗುತ್ತದೆ. ಇದನ್ನು ಮಗಳ ಶಿಕ್ಷಣ ಹಾಗೂ ಮದುವೆಗೆ ಬಳಸಬಹುದಾಗಿದೆ. ಹಾಗಾದರೆ, ತಿಂಗಳಿಗೆ 1 ಸಾವಿರ ರೂ. ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತದೆ? ಇಲ್ಲಿದೆ ಲೆಕ್ಕಾಚಾರ.
ಹೀಗಿದೆ ಲೆಕ್ಕಾಚಾರ
ಮಾಸಿಕ ಹೂಡಿಕೆ 1,000 ರೂ.
ವರ್ಷದ ಒಟ್ಟು ಹೂಡಿಕೆ 12,000 ರೂ.
ಹೂಡಿಕೆಯ ಅವಧಿ 15 ವರ್ಷ
ಒಟ್ಟು ಜಮೆಯಾದ ಅಸಲು 1,80,000 ರೂ.
ಬಡ್ಡಿದರ ಶೇ.8.2
21 ವರ್ಷದ ನಂತರ ಸಿಗುವ ಅಂದಾಜು ಮೊತ್ತ 5,50,000 ಗಿಂತ ಹೆಚ್ಚು
ಯೋಜನೆಯ ಸಂಕ್ಷಿಪ್ತ ಮಾಹಿತಿ
ವಯೋಮಿತಿ: 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಲ್ಲಿ ಖಾತೆ ತೆರೆಯಬಹುದು.
ಕನಿಷ್ಠ ಮತ್ತು ಗರಿಷ್ಠ ಹೂಡಿಕೆ: ಒಂದು ವರ್ಷದಲ್ಲಿ ಕನಿಷ್ಠ ₹250 ರಿಂದ ಗರಿಷ್ಠ ₹1.5 ಲಕ್ಷದವರೆಗೆ ಹೂಡಿಕೆ ಮಾಡಬಹುದು.
ತೆರಿಗೆ ವಿನಾಯಿತಿ: ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ ಹೂಡಿಕೆ ಮಾಡುವ ಮೊತ್ತಕ್ಕೆ ತೆರಿಗೆ ವಿನಾಯಿತಿ ಇದೆ. ಹಾಗೆಯೇ, ಸಿಗುವ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತಕ್ಕೂ ತೆರಿಗೆ ಇರುವುದಿಲ್ಲ.
ಅವಧಿ: ಖಾತೆ ತೆರೆದ ದಿನದಿಂದ 21 ವರ್ಷಗಳ ನಂತರ ಯೋಜನೆ ಪೂರ್ಣಗೊಳ್ಳುತ್ತದೆ. ಮಗುವಿಗೆ 18 ವರ್ಷ ತುಂಬಿದ ನಂತರ ಉನ್ನತ ಶಿಕ್ಷಣಕ್ಕಾಗಿ ಶೇ.50 ರಷ್ಟು ಹಣ ಹಿಂಪಡೆಯಬಹುದು.
ಬೇಕಾಗುವ ದಾಖಲೆಗಳು
ಮಗುವಿನ ಜನ್ಮ ಪ್ರಮಾಣ ಪತ್ರ, ಪೋಷಕರ ಗುರುತಿನ ಚೀಟಿ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್), ಪೋಷಕರ ವಿಳಾಸದ ಪುರಾವೆ, ಪೋಷಕರು ಮತ್ತು ಮಗುವಿನ ಭಾವಚಿತ್ರ. ನೀವು ಯಾವುದೇ ಅಂಚೆ ಕಚೇರಿ ಅಥವಾ ಅಧಿಕೃತ ಬ್ಯಾಂಕ್ ಗಳಲ್ಲಿ ಈ ಖಾತೆಯನ್ನು ಸುಲಭವಾಗಿ ತೆರೆಯಬಹುದು.
ಇದನ್ನೂ ಓದಿ : ಮಹಿಳಾ ದಿನಾಚರಣೆ ಸಂಭ್ರಮ | 30 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ವಿಶೇಷ ವಾಕ್‌ಥಾನ್ ಕಾರ್ಯಕ್ರಮ



















