ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸಿದೆ.
ಈ ಕುರಿತು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ (R.Ashok) ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿಧಾನಸಭೆಯ ಮುಂದೆ ಪ್ರತಿಭಟನೆ ನಡೆಸಿದರು.
ಈ ವೇಳೆ ಆರ್.ಅಶೋಕ್ ‘ಸಿದ್ದು ಸರ್ಕಾರದಲ್ಲಿ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ’ ಎಂಬ ಘೋಷಣೆಯುಳ್ಳ ಭಿತ್ತಿಪತ್ರ ಹಿಡಿದಿದ್ದರು. ಛಲವಾದಿ ನಾರಾಯಣಸ್ವಾಮಿ ಅವರು ‘ನಿಷ್ಠಾವಂತ ಅಧಿಕಾರಿಗಳಿಗೆ ರಕ್ಷಣೆ ಕೊಡಿ’ ಎಂಬ ಭಿತ್ತಿಪತ್ರ ಹಿಡಿದಿದ್ದರು. ಈ ಸಂದರ್ಭದಲ್ಲಿ ಮಾತನಾಡಿರುವ ಆರ್. ಅಶೋಕ್, ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳು ಕೆಲಸ ಮಾಡದ ರೀತಿಯಲ್ಲಿ ವಾತಾವರಣ ಇದೆ. ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಬ್ ಇನ್‍ಸ್ಪೆಕ್ಟರ್ ಒಬ್ಬರು ಪ್ರಾಣ ಕಳಕೊಂಡಿದ್ದಾರೆ. ಸರಣಿ ಎಂಬಂತೆ ಅಧಿಕಾರಿಗಳ ಆತ್ಮಹತ್ಯೆ ನಡೆಯುತ್ತಿದ್ದರೂ ಬೆದರಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ನಮ್ಮ ಎಲ್ಲ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಉತ್ತರ ನೀಡುತ್ತಿಲ್ಲ. ಹೀಗಾಗಿಯೇ ನಾವು ಜನರಿಂದ ಉತ್ತರ ಬಯಸುತ್ತಿದ್ದೇವೆ. ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿಸುವಾಗ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ದೊಡ್ಡ ವಿಷಯವನ್ನಿಟ್ಟು ನಿರ್ಮಿಸಿದ್ದಾರೆ. ಹೆಣ್ಣೂ ಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ದೇವರ ಕೆಲಸವೇ? ನಾವು ಹೇಳಿದಂತೆ ನಡೆದುಕೊಳ್ಳದಿದ್ದರೆ ಲಾರಿ ಹತ್ತಿಸುತ್ತೇವೆ ಎಂದು ಬೆದರಿಸುವುದು ದೇವರ ಕೆಲಸವೇ? ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.