ಮೈಸೂರು: ವ್ಯಕ್ತಿಯೊಬ್ಬರು ಬಹಿಷ್ಕಾರಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ನಂಜನಗೂಡು Nanjanagudu)ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.
ಸ್ವಾಮಿ (48) ಸಾವನ್ನಪ್ಪಿದ ದುರ್ದೈವಿ. ಸದ್ಯ ಸ್ವಾಮಿ ಅವರ ಸಾವಿನ ಬಗ್ಗೆ ಅವರ ತಾಯಿ ಕಣ್ಣೀರು ಸುರಿಸಿ, ಗ್ರಾಮಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗ್ರಾಮಸ್ಥರು ನಮಗೆ ಬಹಿಷ್ಕಾರ ಹಾಕಿದ್ದರು. ಅಲ್ಲದೇ, ಒಂದು ಲಕ್ಷ ದಂಡ ಕಟ್ಟಿದರೆ ಮಾತ್ರ ಬಹಿಷ್ಕಾರ ವಾಪಸ್ಸು ಎಂದು ಹೇಳಿದ್ದರು.
ಹೀಗಾಗಿ ಕಳೆದ ಒಂದು ವರ್ಷದಿಂದ ಗ್ರಾಮದ ಹೊರ ವಲಯದಲ್ಲಿ ನಮ್ಮ ಕುಟುಂಬ ವಾಸವಿತ್ತು. ಬಹಿಷ್ಕಾರದಿಂದ ಮನನೊಂದು ಮದ್ಯದಲ್ಲಿ ಮಾತ್ರೆ ಬೆರೆಸಿ ಕುಡಿದು ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ತಾಯಿ ತಿಮ್ಮಮ್ಮ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.