ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದುರ್ಘಟನೆ ಬಹಳ ಘೋರವಾಗಿದೆ. ಅಶ್ರಫ್ ಎಂಬ ವ್ಯಕ್ತಿ ಹತ್ಯೆ ಹಿಂದೆಯೇ ಈ ಕೊಲೆ ಆಗಿದೆ. ಸುಹಾಸ್ ಕೂಡ ರೌಡಿ ಶೀಟರ್ ಆಗಿದ್ದ. ಅದೇನೆ ಇರಲಿ ಈ ರೀತಿಯ ಕೊಲೆ ಆಗಬಾರದು. ನಮಗೆ ಎಲ್ಲರೂ ಒಂದೇ. ಯಾವ ಜಾತಿ ಧರ್ಮದವರೇ ಆದರೂ ಈ ರೀತಿ ಆಗಬಾರದು. ಈ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ. ಈ ಕೊಲೆ ಯಾರೇ ಮಾಡಿದರೂ ಕೂಡ ತನಿಖೆ ಮಾಡಿ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.
ಇವತ್ತು ಸುಹಾಸ್ ಅವರ ಅಂತ್ಯಕ್ರಿಯೆ ಕೂಡಾ ಆಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮಗಳನ್ನು ತೆಗೆದುಕೊಳ್ಳಲು ಪೋಲೀಸರಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಬಿಜೆಪಿ ನಾಯಕರು ಕೂಡ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಹೋಗುತ್ತಿದ್ದಾರೆ. ಅವರು ಕೂಡ ಹೋಗಬಹುದು. ಬಿಜೆಪಿ ಜವಾಬ್ದಾರಿಯುತ ಪಕ್ಷ ಅಂತಾ ಅಂದುಕೊಂಡಿದ್ದೇನೆ. ಯಾರು ಕೂಡ ಜವಾಬ್ದಾರಿ ಮರೆತು ನಡೆದುಕೊಳ್ಳಬಾರದು. ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.