ಬಾಗಲಕೋಟೆ : ಮುಧೋಳ ತಾಲೂಕಿನಲ್ಲಿ ಕಬ್ಬು ಬೆಳೆಗಾರರ ಹೋರಾಟ ಇಂದು ತೀವ್ರ ಸ್ವರೂಪ ಪಡೆದಿದ್ದು, ಮಂಗಳವಾರ ಸಂಜೆಯಿಂದ ರಾತ್ರಿ 11 ಗಂಟೆಯವರೆಗೆ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ನಡೆದ ಸಭೆಯೂ ಫಲಕಾರಿಯಾಗದ ಹಿನ್ನೆಲೆಯಲ್ಲಿ, ರೈತರು ರಸ್ತೆ ತಡೆ ಪ್ರತಿಭಟನೆಗೆ ಮುಂದಾಗಿದ್ದಾರೆ.
ಜಿಲ್ಲಾಧಿಕಾರಿ ಸಂಗಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರು ಪ್ರತಿ ಟನ್‌ಗೆ 3,500 ರೂ. ದರ ನೀಡುವಂತೆ ಒತ್ತಾಯಿಸಿದ್ದರು. ಆದರೆ ಕಾರ್ಖಾನೆ ಮಾಲೀಕರು ಎಫ್‌ಆರ್‌ಪಿ ಪರಿಗಣನೆ ಇಲ್ಲದೆ 3,300 ರೂ. ನೀಡುವುದಾಗಿ ಹೇಳಿದರೂ, ಎಲ್ಲ ಮಾಲೀಕರಿಂದ ಸ್ಪಷ್ಟ ಉತ್ತರ ದೊರಕದ ಕಾರಣ ಸಭೆ ವಿಫಲವಾಯಿತು.
ಸಭೆ ವಿಫಲವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ರೈತರು ವಿವಿಧ ಕಡೆಗಳಲ್ಲಿ ರಸ್ತೆ ತಡೆ ನಡೆಸಿದ್ದಾರೆ. ಶಿರೋಳ, ಮಂಟೂರು, ಯಡಹಳ್ಳಿ ಸೇರಿದಂತೆ ಹಲವೆಡೆ ಗ್ರಾಮೀಣ ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಶಿರೋಳದ ಬಳಿ ಮುಳ್ಳಿನ ಕಂಟಿ, ಕಲ್ಲು ಹಾಕಿ ರಸ್ತೆ ಬಂದ್ ಮಾಡಿರುವ ರೈತರು ಮೇವಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ.
ಮುಧೋಳ–ಜಮಖಂಡಿ ಮಾರ್ಗ ಸೇರಿದಂತೆ ಬುದ್ನಿ ಪಿಎಂ ರಸ್ತೆಗೂ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಮುಧೋಳ ಪಟ್ಟಣದ ಬಹುತೇಕ ಭಾಗ ಬಂದ್ ಆಗಿದ್ದು, ಪ್ರತಿಭಟನಾಕಾರರು “ಟನ್‌ಗೆ 3,500 ರೂ. ದರ ನೀಡಿ” ಎಂದು ಘೋಷಣೆ ಕೂಗುತ್ತಿದ್ದಾರೆ.
ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಧೋಳ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೋರಾಟ ತೀವ್ರಗೊಳ್ಳುತ್ತಿದೆ. ಸರ್ಕಾರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರೆಗೆ ಒತ್ತಡ ತಂದು ಪ್ರತಿ ಟನ್‌ಗೆ 3500 ದರ ನಿಗದಿಗೊಳಿಸುವವರೆಗೆ ಹೋರಾಟ ಕೈ ಬಿಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದು, ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : RCB ಅಭಿಮಾನಿಗಳಿಗೆ ಬಿಗ್ ಶಾಕ್ | ಇನ್ಮುಂದೆ ಬೆಂಗಳೂರಲ್ಲಿ IPL ಪಂದ್ಯಗಳೇ ನಡೆಯಲ್ಲ!



















