ಚಿಕ್ಕಬಳ್ಳಾಪುರ: ಸೋಮವಾರ ಪೆರೇಸಂದ್ರದಲ್ಲಿ ಸಂತೆ ನಡೆಯುತ್ತದೆ. ಒಳ್ಳೆಯ ಬಳೆಗಳು ಸಿಗುತ್ತವೆ. ನಾನು ಒಂದು ಡಜನ್ ಕೊಡಿಸುತ್ತೇನೆ. ಹಾಕಿಕೊಳ್ಳಲು ಹೇಳಿ ಎಂದು ಶಾಸಕ ಪ್ರದೀಪ್ ಈಶ್ವರ್ ಗೆ ಸಂಸದ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.
ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ನಡೆದ ಜನಸ್ಪಂದನದಲ್ಲಿ ಗಣಿಗಾರಿಕೆ ತಡೆಗೆ ನನಗೆ ಅಧಿಕಾರವಿಲ್ಲ ಎಂದು ಶಾಸಕರು ಹೇಳುತ್ತಿದ್ದಾರೆ ಎನ್ನುವ ಮಾತಿಗೆ ಈ ರೀತಿ ತಿರುಗೇಟು ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ನಂದಿ ಮೆಡಿಕಲ್ ಕಾಲೇಜನ್ನು ಅಭಿವೃದ್ಧಿ ಪಡಿಸುವ ಮನಸ್ಸಿಲ್ಲ. ಹೀಗಾಗಿ ಇಲ್ಲಿಗೆ ಮಂಜೂರಾಗಿದ್ದ ಟ್ರಾಮಾ ಸೆಂಟರ್‌ನ್ನು ಚಿಂತಾಮಣಿಗೆ ತೆಗೆದುಕೊಂಡು ಹೋಗಿದ್ದಾರೆ. ಇದಕ್ಕಾಗಿ ನಾನು ಹೋರಾಟ ನಡೆಸುತ್ತೇನೆ. ಟ್ರಾಮಾ ಸೆಂಟರ್ ಮಾಡಲು 1 ಎಕರೆ ಜಮೀನು ಸಿಕ್ಕಿಲ್ಲ ಎಂಬುವುದು ಸುಳ್ಳು. ಮೆಡಿಕಲ್ ಕಾಲೇಜು ಬಳಿ 60 ಎಕರೆ ಜಾಗವಿದೆ. ಜಾಗವಿಲ್ಲಎಂಬುದು ನೆಪವಷ್ಟೇ ಎಂದಿದ್ದಾರೆ.
ನನ್ನ ಮನೆಯಲ್ಲಿಯೇ ಜಾತಿ ಗಣತಿ ಆಗಿಲ್ಲ, ಯಾರೋ ಹೇಳಿದ್ದು ಜಾತಿಗಣತಿ ಹೇಗೆ ಆಗುತ್ತೆ. ರಾಜ್ಯ ಸರಕಾರ ಜಾತಿ ಗಣತಿ ವಿಚಾರದಲ್ಲಿ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಅಂಬೇಡ್ಕರ್, ಸಂವಿಧಾನ, ಸಮಾನತೆ ಮಾತುಗಳನ್ನಾಡುವ ರಾಜ್ಯ ಸರಕಾರದ ಪ್ರತಿನಿಧಿಗಳು ಜಾತಿ ಜಾತಿ ಮಧ್ಯೆ ವೈಷಮ್ಯ ಬೆಳೆಸಿ, ಅದರಿಂದ ರಾಜಕೀಯ ಬೇಳೆ ಬೇಯುತ್ತೆ ಎಂದು ಭಾವಿಸಿದ್ದರೆ, ಚರಿತ್ರೆಯು ನಿಮ್ಮನ್ನು ಕ್ಷಮಿಸಲ್ಲ ಎಂದು ಗುಡುಗಿದ್ದಾರೆ.
ಸರಕಾರಿ ಕಚೇರಿಗಳು ಕಲೆಕ್ಷನ್ ಕೇಂದ್ರಗಳಾಗಿವೆ. ತಹಸೀಲ್ದಾರ್ ಕಚೇರಿಯಲ್ಲಿ ದುಡ್ಡು ಕೊಡದೇ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.