ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆಯಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತಿದ್ದು, ಹಲವಾರು ಬಡ ಮಹಿಳೆಯರಿಗೆ ಇದು ಆಸರೆಯಾಗಿದೆ. ಆದರೆ, ಸರ್ಕಾರಕ್ಕೆ ಮಾತ್ರ ತುಂಬಾ ಹೊರೆ ಆಗಿದೆ. ಹೀಗಾಗಿ ಕೆಲವು ಮಾರ್ಪಾಡು ಮಾಡಲು ಸರ್ಕಾರ ಮುಂದಾಗಿದೆ.
ಜಿಎಸ್ ಟಿ (GST), ಆದಾಯ ತೆರಿಗೆ (Income Tax) ತುಂಬುವವರ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಅರ್ಜಿಗಳನ್ನು ತಿರಸ್ಕರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.
ಜಿಎಸ್ ಟಿ, ಆದಾಯ ತೆರಿಗೆ ತುಂಬುವವರಿಗೆ ಬರಲ್ಲ ಅಂತಾ ಹೇಳಿದ್ದೇವೆ. ಆದರೆ ಜಿಎಸ್ ಟಿ ಇದ್ದವರೂ ನಮ್ಮ ಪೋರ್ಟಲ್ ಗೆ ಅರ್ಜಿ ಹಾಕಿದ್ದರು. ಅವುಗಳನ್ನು ತಿರಸ್ಕರಿಸಲಾಗಿದೆ. ಈ ರೀತಿಯಾಗಿ ಸುಮಾರು ಹದಿನೈದು ಸಾವಿರ ಅರ್ಜಿಗಳು ಬಂದಿದ್ದವು. ಜಿಎಸ್ ಟಿ ಇರುವ ಕಾರಣಕ್ಕೆ ಅರ್ಜಿ ತಿರಸ್ಕಾರ ಮಾಡಿದ್ದೇವೆ. 1 ಕೋಟಿ 23 ಲಕ್ಷ ಫಲಾನುಭವಿಗಳಿಗೆ ಹಣ ಹಾಕಲಾಗುತ್ತಿದೆ. ಇಡೀ ರಾಜ್ಯದಲ್ಲಿ ಶ್ರೀಮಂತರು, ಜಿಎಸ್ ಟಿ ಇದ್ದವರು ಸೇರಿ ಒಟ್ಟು 1 ಕೋಟಿ 58 ಲಕ್ಷ ಕುಟುಂಬಗಳಿವೆ. ಇಂದಿಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದು. ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಿದೆ ಎಂದು ಹೇಳಿದ್ದಾರೆ.
ಆದರೂ ಜೂನ್ ತಿಂಗಳದ್ದು ಸುಮಾರು 80 ಸಾವಿರ ಜನರಿಗೆ ಹಣ ತಲುಪಿಲ್ಲ. ಉಂಟಾಗಿರುವ ತಾಂತ್ರಿಕ ದೋಷವನ್ನು ಈಗಾಗಲೇ ಸರಿ ಮಾಡಿದ್ದೇವೆ. ಜುಲೈ ಮತ್ತು ಆಗಷ್ಟ್ ತಿಂಗಳದ್ದು ಕೂಡ ಸಿಎಂ ಜೊತೆಗೆ ಚರ್ಚಿಸಿ, ಇನ್ನೊಂದು ವಾರದಲ್ಲಿ ಎರಡು ತಿಂಗಳ ಕಂತನ್ನು ಏಕಕಾಲದಲ್ಲಿ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.