ಬೆಂಗಳೂರು : ಇತ್ತೀಚೆಗೆ ಹೆಬ್ಬಾಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ದರೋಡೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ರ‍್ಯಾಪಿಡೋ ಕಾರು ಚಾಲಕ ಅಬ್ದುಲ್ ರೆಹಮಾನ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ದೂರುದಾರ ಸೈಯದ್ ಅಕ್ರಂ ಮನೆಯಲ್ಲಿ ಫೆ. 11ರಂದು 26,88,000 ರೂ. ಮೌಲ್ಯದ ಚಿನ್ನಾಭರಣ ಕಳುವಾದ ಬಗ್ಗೆ ಹೆಬ್ಬಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಡಿಸಿಪಿ ನೇಮಗೌಡ ಆದೇಶದಂತೆ ಎಸಿಪಿ ತನ್ವಿರ್ ನೇತೃತ್ವದಲ್ಲಿ ತನಿಖಾಧಿಕಾರಿ ಇನ್‌ಸ್ಪೆಕ್ಟರ್ ಭೈರ ಮತ್ತವರ ಸಿಬ್ಬಂದಿ ವರ್ಗದ ಕಾರ್ಯಾಚರಣೆ ಯಶಸ್ವಿಯಾಗಿದೆ.

ಫೆ.11 ರಂದು ಮಧ್ಯಹ್ನಾ 2.30ರ ಸುಮಾರಿಗೆ ಮನೆಯ ಬಾಗಿಲಿಗೆ ಬೀಗ ಹಾಕಿ ಸೈಯದ್ ಅಕ್ರಂ ಅವರು ಶಾಪಿಂಗ್ ನಿಮಿತ್ತ ಮುಂಬೈಗೆ ತೆರಳಿದ್ದರು. ಬಳಿಕ ಫೆ.16ರಂದು ಮನೆಗೆ ಮರಳಿದಾಗ ಕಳ್ಳತನವಾಗಿರುವುದ ಬೆಳಕಿಗೆ ಬಂದಿತ್ತು. ಕೂಡಲೇ ಎಚ್ಚೆತ್ತ ಸೈಯದ್ ಅಕ್ರಂ, ಹೆಬ್ಬಾಳ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆಸಿದಾಗ ದೂರುದಾರ ಕಾರು ಬುಕ್ ಮಾಡಿ ಯಶವಂತಪುರಕ್ಕೆ ಡ್ರಾಪ್ ತೆಗೆದುಕೊಂಂಡಿರುವುದು ಗೊತ್ತಾಗಿದೆ. ಆ ಬಳಿಕ ತಾಂತ್ರಿಕ ಸಾಕ್ಷ್ಯಗಳು ಹಾಗೂ ಮಾಹಿತಿ ಸಂಗ್ರಹದ ಆಧಾರದ ಮೇಲೆ ಆರೋಪಿ ಕ್ಯಾಬ್ ಚಾಲಕನನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ಧಾರೆ.
ತನಿಖೆ ವೇಳೆ ಬಂಧಿತ ಆರೋಪಿ ಅಬ್ದುಲ್ ರೆಹಮಾನ್ ಹಲವು ಮಾಹಿತಿಗಳನ್ನು ಬಾಯ್ಬಿಟ್ಟಿದ್ದು, ದೂರುದಾರ ತಮ್ಮ ಮನೆಯಿಂದ ರ‍್ಯಾಪಿಡೋ ಮೂಲಕ ಕಾರ್ ಬುಕ್ ಮಾಡಿಕೊಂಡು ಯಶವಂತಪುರ ರೈಲ್ವೆ ನಿಲ್ದಾಣ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಹೋಗುವಾಗ ತಮ್ಮ ಕುಟುಂಬ ಸಮೇತ 4-5 ದಿನಗಳ ಕಾಲ ಮುಂಬೈಗೆ ಹೋಗುತ್ತಿರುವ ಬಗ್ಗೆ ಫೋನ್‌ನಲ್ಲಿ ಮಾತನಾಡುವುದನ್ನು ಗಮನಿಸಿ ಮನೆ ದರೋಡೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಇನ್ನು ಈ ಹಿಂದೆಯೂ ಕೂಡ ಆರೋಪೀಯ ವಿರುದ್ಧ ಕೆ.ಜೆ ಹಳ್ಳಿ ಹಾಗೂ ರಾಮೂರ್ತಿನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದವು. ಸದ್ಯ ಆರೋಪಿಯನ್ನು ಬಂಧಿಸಿದ ಪೊಲೀಸರು, ಆತನಿಂದ ಸುಮಾರು 26,88,000 ರೂ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಶತ್ರುವಿನ ಶತ್ರು ಮಿತ್ರ.. ಇರಾನ್‌ಗೆ ಅಮೆರಿಕದ ಸೇನಾ ನೆಲೆಗಳ ಗುಪ್ತ ಮಾಹಿತಿ ರವಾನಿಸುತ್ತಿರುವುದು ಯಾರು?



















