ಬೆಂಗಳೂರು : ಕೇವಲ ಕೆಲವೇ ದಿನಗಳ ಹಿಂದೆ 12 ತಾಸಿನಲ್ಲಿ ಮೂರು ಹೃದಯ ಕಸಿ ಮಾಡಿ ದಾಖಲೆ ನಿರ್ಮಿಸಿದ್ದ ನಗರದ ಪ್ರತಿಷ್ಠಿತ ನಾರಾಯಣ ಹೆಲ್ತ್ ಆಸ್ಪತ್ರೆಯು, ಇದೀಗ ಮತ್ತೊಂದು ವಿಶೇಷ ಕಾರ್ಯಕ್ಕೆ ಸಾಕ್ಷಿಯಾಗಿದೆ.
ಇಂದು ನಾರಾಯಣ ಹೆಲ್ತ್ ಮತ್ತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್)ನ ಜಂಟಿ ಸಹಯೋಗದಲ್ಲಿ, ದಾನಿಯೊಬ್ಬರ ಶ್ವಾಸಕೋಶವು ನಗರದ ಯಶವಂತಪುರದಿಂದ ನಾರಾಯಣ ಹೆಲ್ತ್ ಸಿಟಿಗೆ (ಸುಮಾರು 30-33 ಕಿ.ಮೀ.) ಕೇವಲ 61 ನಿಮಿಷಗಳಲ್ಲಿ ತಲುಪಿಸಲಾಗಿದೆ.
ನಮ್ಮ ಮೆಟ್ರೋ ರೈಲಿನಲ್ಲಿ ಈಗಾಗಲೇ ಹೃದಯ ಸೇರಿದಂತೆ ಯಶಸ್ವಿಯಾಗಿ ಅಂಗಾಂಗ ಸಾಗಾಟ ಮಾಡಲಾಗಿದ್ದು, ಇದೀಗ ಶ್ವಾಸಕೋಶ ಸಾಗಾಟ ಮಾಡಲಾಗಿದೆ. ಟ್ರಾಫಿಕ್ ಸಮಸ್ಯೆ ಹಿನ್ನೆಲೆ ನಮ್ಮ ಮೆಟ್ರೋ ಆಯ್ಕೆ ಮಾಡಿಕೊಂಡ ವೈದ್ಯರ ತಂಡ, ಯಶವಂತಪುರ ಟು ಆರ್.ವಿ ರೋಡ್ವರೆಗೆ ಗ್ರೀನ್ ಲೈನ್ನಲ್ಲಿ ಸಂಚರಿಸಿ, ಬಳಿಕ ಆರ್.ವಿ ರೋಡ್ ಟು ಬೊಮ್ಮಸಂದ್ರವರೆಗೆ ಹಳದಿ ಲೈನ್ನಲ್ಲಿ ಸಂಚಾರ ಮಾಡಿದ್ದಾರೆ. ಬಿಎಂಆರ್‌ಸಿಎಲ್ ಮತ್ತು ವೈದ್ಯಕೀಯ ತಂಡದ ಸಹಯೋಗದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಸದ್ಯ ವೈದ್ಯರ ತಂಡದ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಸಂಚಾರ ದಟ್ಟಣೆಯ ಸಮಯದಲ್ಲಿಯೂ ದಾನಿಯ ಪ್ರಮುಖ ಅಂಗವನ್ನು ಆಸ್ಪತ್ರೆಗೆ ತ್ವರಿತವಾಗಿ ತಲುಪಿಸಲು ಸಹಕರಿಸಿದ BMRCLನ ಸಹಾಯ ಮತ್ತು ಸಹಕಾರವನ್ನು ನಾರಾಯಣ ಹೆಲ್ತ್ ಆಸ್ಪತ್ರೆಯು ಸ್ಮರಿಸಿದೆ ಹಾಗೂ ಅವರಿಗೆ ತನ್ನ ಆಳವಾದ ಧನ್ಯವಾದಗಳನ್ನು ಸಲ್ಲಿಸಿದೆ.
ಇದನ್ನೂ ಓದಿ : IPL 2026 : ಕೆಕೆಆರ್ ತಂಡದ ನೂತನ ಹೆಡ್ ಕೋಚ್ ಆಗಿ ಅಭಿಷೇಕ್ ನಾಯರ್ ನೇಮಕ!



















