ಬೆಂಗಳೂರು: ಕರ್ನಾಟಕದಲ್ಲಿ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ರಾಜ್ಯದ ಮಾದರಿಯನ್ನು ಆಂಧ್ರಪ್ರದೇಶದಲ್ಲೂ ಅಳವಡಿಸಿಕೊಳ್ಳಲು ಈಗ ಅಲ್ಲಿನ ಸಿಎಂ ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಂಧ್ರಸಚಿವರ ನಿಯೋಗ ರಾಜ್ಯಕ್ಕೆ ಅಧ್ಯಯನಕ್ಕಾಗಿ ಆಗಮಿಸಿದೆ.
ಕರ್ನಾಟಕದ ಸರ್ಕಾರದ ‘ಶಕ್ತಿ’ ಯೋಜನೆ ಕುರಿತು ಅಧ್ಯಯನ ನಡೆಸಲು ಆಂಧ್ರ ಪ್ರದೇಶದ ಸಾರಿಗೆ ಸಚಿವ ರಾಮಪ್ರಸಾದ್ ರೆಡ್ಡಿ ನೇತೃತ್ವದ ಸಚಿವರ ನಿಯೋಗ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಭೇಟಿ ನೀಡಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಆಂಧ್ರ ಪ್ರದೇಶದ ಸಾರಿಗೆ, ಯುವ ಸಬಲೀಕರಣ ಕ್ರೀಡಾ ಸಚಿವ ಮಂಡಿಪಲ್ಲಿ ರಾಮ ಪ್ರಸಾದ್ ರೆಡ್ಡಿ, ಗೃಹ ಮತ್ತು ವಿಪತ್ತು ನಿರ್ವಹಣಾ ಸಚಿವೆ ವಂಗಲಪುಡಿ ಅನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಗುಮ್ಮಟ್ಟಿ ಸಂಧ್ಯಾರಾಣಿ ನೇತೃತ್ವದ ತಂಡ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಆಂಧ್ರ ಸಾರಿಗೆ ಸಚಿವ ರಾಮಪ್ರಸಾದ್ ರೆಡ್ಡಿ ನೇತೃತ್ವದ ಸಚಿವರ ನಿಯೋಗಕ್ಕೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅನ್ಬುಕುಮಾರ್, ಬಿಎಂಟಿಸಿ ಎಂಡಿ ಆರ್ ರಾಮಚಂದ್ರನ್ ಮತ್ತು ವಿಜಿಲೆನ್ಸ್ ನಿರ್ದೇಶಕಿ ನಂದಿನಿ ದೇವಿ ಯೋಜನೆ ಕುರಿತು ಮಾಹಿತಿ ನೀಡಿದರು.
ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು 6 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದರು. 6 ಗ್ಯಾರಂಟಿ ಯೋಜನೆಗಳಲ್ಲಿ ಉಚಿತ ಬಸ್ ಪ್ರಯಾಣ ಯೋಜನೆ ಕೂಡ ಒಂದಾಗಿತ್ತು. ಹೀಗಾಗಿ ಯೋಜನೆ ಜಾರಿಗೆ ಸಿದ್ಧತೆ ಆರಂಭಿಸಿರುವ ಚಂದ್ರಬಾಬು ನಾಯ್ಡು ಸರ್ಕಾರ, ಕಾರ್ಯಸಾಧ್ಯತೆ, ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಲು ರಾಜ್ಯಕ್ಕೆ ಆಗಮಿಸಿದ್ದಾರೆ.