ಬೀದರ್ : ಬೆಳಗಿನ ಉಪಹಾರ ಹಿಡಿದು ವಸತಿ ನಿಲಯದ ವಿದ್ಯಾರ್ಥಿನಿಯರು ಬಸವಕಲ್ಯಾಣ ಶಾಸಕ ಶರಣು ಸಲಗರ್ ಮನೆಗೆ ಬಂದು ಅಳಲು ತೋಡಿಕೊಂಡಿದ್ದಾರೆ. ಬಸವಕಲ್ಯಾಣ ನಗರದ ಬಂದರು ಓಣಿಯಲ್ಲಿರುವ ಡಾ.ಬಿ.ಆರ್.ಮೆಟ್ರಿಕ್ ನಂತರ ಬಾಲಕಿಯರ ವಸತಿಯ ದುಸ್ಥಿತಿ ಬಗ್ಗೆ ಎಳೆಎಳೆಯಾಗಿ ವಿದ್ಯಾರ್ಥಿನಿಯರು ಬಿಚ್ಚಿಟ್ಟಿದ್ದಾರೆ.
ಶಾಸಕ ಶರಣು ಸಲಗರ್ ಕಚೇರಿ ಮುಂಭಾದಲ್ಲಿರುವ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಬೆಳಗಿನ ಟಿಫಿನ್, ಮಧ್ಯಾಹ್ನ ಮತ್ತು ರಾತ್ರಿ ಊಟ ಸರಿಯಾಗಿ ಕೊಡುತ್ತಿಲ್ಲ. ಹಾಗೂ ಹಾಸ್ಟೆಲ್‌ನಲ್ಲಿ ಯಾವುದೇ ಸೌಲಭ್ಯ ಇಲ್ಲ. ನಾವೇನಾದರೂ ಕೇಳಿದರೆ ಓದೋಕೆ ಬಂದಿದ್ದೀರಾ? ಇಲ್ಲ ಬರೀ ಊಟ ಮಾಡೋಕೆ ಬಂದಿದ್ದೀರಾ ಅಂತಾರೆ. ನಾವು ಕೇಳುವವರೆಗೂ ಸಾಬೂನು ಬಾಕ್ಸ್ ಏನನ್ನೂ ಕೊಡಲ್ಲ. ಹಾಸ್ಟೆಲ್‌ನಲ್ಲಿ ಇರೋದೆ 15-20 ಜನರಿದ್ದೀವಿ ಮನೆಯಲ್ಲಿರುವ ಊಟದ ಹಾಗೆ ಒಂದಿನವೂ ಕೊಡಲ್ಲ ಎಂದ ಹಾಸ್ಟೆಲ್‌ನಿಂದ ಬೆಳಗಿನ ಉಪಹಾರ ತಂದು ತೋರಿಸಿ ವಿದ್ಯಾರ್ಥಿನಿಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪ್‌ಕುಮಾರ್‌ನಿಗೆ ಶಾಸಕ ಶರಣು ಸಲಗರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಟಿಫಿನ್ ನೀನು ಮತ್ತು ವಾರ್ಡನ್ ತಿನ್ನಬೇಕು, ನಿಮ್ಮ ಜನ್ಮಕ್ಕೆ ನಾಚಿಕೆಯಾಗಬೇಕು ಮತ್ತೆ ನಿಮಗೆ ನೌಕರರ ಸಂಘದ ಅಧ್ಯಕ್ಷ ಬೇರೆ ಕೇಡು, ಹೋಪ್ ಲೆಸ್ ಫೆಲೋ ಟಿಫಿನ್ ನೋಡಿದ್ರೆ ಬೆಂಕಿಯಿಟ್ಟಂಗೆ ಆಗ್ತಿದೆ ಎಂದು ಫೋನ್‌ನಲ್ಲೇ ತರಾಟೆ ತೆಗೆದುಕೊಂಡಿದ್ದಾರೆ. ಹಾಗೆಯೇ, ನಿನ್ನ ಮಕ್ಕಳಿಗೆ ಅನ್ನ ಹಾಕ್ತಿಯೋ, ಇದನ್ನೇ ತಿನ್ನಿಸ್ತಿಯೋ ನಾಚಿಕೆ, ಮಾನ-ಮರ್ಯಾದೆ ಏನಾದ್ರೂ ಇದೇನಾ ನಿಮಗೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್‌ಗೂ ಫೋನ್ ಮಾಡಿ ಕ್ಲಾಸ್ ತೆಗೆದುಕೊಂಡ ವಾರ್ಡನ್‌ಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ.
ಇದನ್ನೂ ಓದಿ : ಮನೆಗೆ ನುಗ್ಗಿ ಮಾಜಿ ಪತ್ನಿಯ ಹ*ತ್ಯೆಗೈದ ಟೆಕ್ಕಿ | ಕೆನಡಾಗೆ ಹೋಗಲಾಗದ ಕೋಪವೇ ಕೊಲೆಗೆ ಕಾರಣ?



















