ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue) ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 424 ಜನರಲ್ಲಿ ಕಾಣಿಸಿಕೊಂಡಿದೆ.
ಅಲ್ಲದೇ, ಡೆಂಗ್ಯೂ ಇಂದು ವಿದ್ಯಾರ್ಥಿನಿಯನ್ನು ಬಲಿ ಪಡೆದಿದೆ. ಜೊತೆಗೆ ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ 24 ಗಂಟೆಗಳಲ್ಲಿ 202 ಡೆಂಗ್ಯೂ ಪ್ರಕರಣ ದಾಖಲಾಗಿವೆ. ಈ ಮೂಲಕ ರಾಜ್ಯದಲ್ಲಿ 9,082ಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ.
ಹಾಸನ, ಹಾವೇರಿ, ಚಿಕ್ಕಮಗಳೂರು ಕೆಲ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಮಗೊಂಡ್ಲು ಗ್ರಾಮದಲ್ಲಿ ಶಂಕಿತ ಡೆಂಗ್ಯೂಗೆ ವಿದ್ಯಾರ್ಥಿ ಬಲಿಯಾಗಿರುವ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಪುತ್ತೂರು ತಾಲೂಕಿನ ಪಡ್ನೂರಿನ ಯತೀಶ್ (50) ಮೃತ ವ್ಯಕ್ತಿ. ಮೂಲತಃ ಬಂಟ್ವಾಳ ತಾಲೂಕಿನ ಶಂಭೂರು ನಿವಾಸಿ. ಜು.10 ರಂದು ಯತೀಶ್ಗೆ ಜ್ವರ ಕಾಣಿಸಿಕೊಂಡಿತ್ತು. ವಿಪರೀತ ಜ್ವರದಿಂದ ಬಳಲುತ್ತಿದ್ದ ಯತೀಶ್ರನ್ನು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ.
ಪ್ರಥಮ ವರ್ಷದ ಪದವಿ ಓದುತ್ತಿದ್ದ ಅಶ್ವಿನಿ ಜ್ವರ ಅಂತಾ ಆಸ್ಪತ್ರೆ ಸೇರಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ಪಡೆಯುತ್ತಿದ್ದ ಅಶ್ವಿನಿ, ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ. ಹಾಸನದಲ್ಲೇ ಹೆಚ್ಚು ಮಕ್ಕಳು ಡೆಂಗ್ಯೂಗೆ ಬಲಿಯಾಗಿದ್ದಾರೆ. 15 ವರ್ಷದೊಳಗಿನ 6 ಮಕ್ಕಳು ಪ್ರಾಣ ಹಾಸನದಲ್ಲಿ ಸಾವನ್ನಪ್ಪಿದದ್ರೆ. ಗದಗ ಜಿಲ್ಲೆಯಲ್ಲೂ ಇಬ್ಬರು ಮಕ್ಕಳು ಡೆಂಗ್ಯೂಯಿಂದಲೇ ಸಾವನ್ನಪ್ಪಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೂಡ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ ಎನ್ನಲಾಗಿದೆ. ಹಾವೇರಿಯಲ್ಲಿ ಇಬ್ಬರು ಮಕ್ಕಳು ಹೆಮ್ಮಾರಿಗೆ ಮೃತಪಟ್ಟಿದ್ದರೆ, ಚಿಕ್ಕಮಗಳೂರಿನಲ್ಲಿ 1 ಮಗು ಡೆಂಗ್ಯೂ ಕಾರಣಕ್ಕೆ ಪ್ರಾಣ ಬಿಟ್ಟಿದೆ. ಬೆಂಗಳೂರಿನಲ್ಲೂ ಒಂದು ಮಗು ಡೆಂಗ್ಯೂಯಿಂದಲೇ ಉಸಿರು ನಿಲ್ಲಿಸಿದೆ ಎನ್ನಲಾಗಿದೆ.
