ನವದೆಹಲಿ: ದಕ್ಷಿಣ ದೆಹಲಿಯ ಸೌತ್ ಏಷ್ಯನ್ ಯೂನಿವರ್ಸಿಟಿ (SAU) ಕ್ಯಾಂಪಸ್‌ನಲ್ಲಿ 18 ವರ್ಷದ ವಿದ್ಯಾರ್ಥಿನಿಯ ಮೇಲೆ ನಾಲ್ವರು ಅಪರಿಚಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಆಘಾತಕಾರಿ ಘಟನೆ ವರದಿಯಾಗಿದೆ. ಘಟನೆಯ ನಂತರ ಸಹಾಯಕ್ಕೆ ಮುಂದಾಗಬೇಕಿದ್ದ ಹಾಸ್ಟೆಲ್ ಅಧಿಕಾರಿಗಳೇ ಸಂತ್ರಸ್ತೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದಲ್ಲದೆ, “ಹುಡುಗಿಯರಿಗೆ ತುಂಬಾ ಬಾಯ್‌ಫ್ರೆಂಡ್ಸ್ ಇರುತ್ತಾರೆ,” ಎಂದು ಹೇಳಿ, “ಹೋಗಿ ಸ್ನಾನ ಮಾಡಿ ಬಟ್ಟೆ ಬದಲಿಸು ಸಾಕು,” ಎಂದು ಸಲಹೆ ನೀಡಿರುವ ಆರೋಪ ಕೇಳಿಬಂದಿದೆ.
ಪೊಲೀಸರಿಗೆ ನೀಡಿದ ದೂರಿನಲ್ಲಿ (ಎಫ್‌ಐಆರ್) ಸಂತ್ರಸ್ತೆ, ತಾನು ಅತ್ಯಾಚಾರಕ್ಕೊಳಗಾದ ತಕ್ಷಣ ಹಾಸ್ಟೆಲ್ ಇನ್‌ಚಾರ್ಜ್ ಬಳಿ ಸಹಾಯಕ್ಕಾಗಿ ಧಾವಿಸಿದೆ. ಆದರೆ ಅವರು ನನ್ನನ್ನೇ ದೂಷಿಸಲು ಆರಂಭಿಸಿದರು ಎಂದು ಆರೋಪಿಸಿದ್ದಾರೆ. “ಹಾಸ್ಟೆಲ್‌ನಲ್ಲಿ ಭದ್ರತೆ ಇಲ್ಲದಿದ್ದರೆ ಹುಡುಗಿಯರು ತಮ್ಮ ಕೋಣೆಗೇ ಹುಡುಗರನ್ನು ಕರೆತರುತ್ತಾರೆ,” ಎಂಬಂತಹ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾರೆ. ನನ್ನ ಸ್ಥಿತಿ ಹದಗೆಡುತ್ತಿದ್ದರೂ, ಅಧಿಕಾರಿಗಳು ಪೊಲೀಸರಿಗೆ ಅಥವಾ ವೈದ್ಯಕೀಯ ಸಹಾಯಕ್ಕೆ ಕರೆ ಮಾಡುವ ಬದಲು, ಸ್ನಾನ ಮಾಡಿ ಬಟ್ಟೆ ಬದಲಾಯಿಸಲು ಒತ್ತಾಯಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ.
ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿನಿಗೆ ಬೆದರಿಕೆ ಇ-ಮೇಲ್‌ಗಳು ಮತ್ತು ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಹಾಸ್ಟೆಲ್‌ನಿಂದ ಹೊರಗೆ ಬರುವಂತೆ ಒತ್ತಾಯಿಸಲಾಗಿದೆ. ನಂತರ, ಭಾನುವಾರ ರಾತ್ರಿ ವಿಶ್ವವಿದ್ಯಾಲಯದ ಘಟಿಕೋತ್ಸವ ಕೇಂದ್ರದ ಬಳಿ ಆಕೆಯ ಮೇಲೆ ನಾಲ್ವರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ದೆಹಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ವಿಷ ಪದಾರ್ಥ ನೀಡಿರುವಿಕೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಹಲವು ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ದೆಹಲಿ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ. ಮದನ್ ಮೋಹನ್ ಮಾಳವೀಯ ಆಸ್ಪತ್ರೆಯಲ್ಲಿ ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ಮತ್ತು ಸಮಾಲೋಚನೆ ನಡೆಸಿದ ನಂತರ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
“ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ”
ಸಂತ್ರಸ್ತೆಯು ತನ್ನ ತಾಯಿಗೆ ವಿಡಿಯೋ ಕಾಲ್ ಮಾಡಿ ಗಾಯಗಳನ್ನು ತೋರಿಸಲು ಯತ್ನಿಸಿದಾಗ, ಹಾಸ್ಟೆಲ್ ಇನ್‌ಚಾರ್ಜ್ ಮತ್ತು ಸಿಬ್ಬಂದಿ ದೈಹಿಕವಾಗಿ ತಡೆದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಕೊನೆಗೆ, ಸಂತ್ರಸ್ತೆಯ ಸ್ನೇಹಿತರು ಮಧ್ಯಪ್ರವೇಶಿಸಿ ಸೋಮವಾರ ಮಧ್ಯಾಹ್ನ ಪೊಲೀಸ್ ಕಂಟ್ರೋಲ್ ರೂಮ್‌ಗೆ (PCR) ಕರೆ ಮಾಡಿದ ನಂತರವೇ ವಿಷಯ ಹೊರಬಂದಿದೆ.
ಈ ಘಟನೆಯಿಂದ ಆಕ್ರೋಶಗೊಂಡಿರುವ ವಿದ್ಯಾರ್ಥಿಗಳು, ಕ್ಯಾಂಪಸ್‌ನಲ್ಲಿ ಸುರಕ್ಷತೆ ಹೆಚ್ಚಿಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ನಿಷ್ಪಕ್ಷ ತನಿಖೆಗೆ ಆಗ್ರಹಿಸಿದೆ. ವಿಶ್ವವಿದ್ಯಾಲಯವು ಆಂತರಿಕ ತನಿಖಾ ಸಮಿತಿಯನ್ನು ರಚಿಸಿದ್ದು, ತರಗತಿಗಳನ್ನು ಅಮಾನತುಗೊಳಿಸಿದೆ. ಕ್ಯಾಂಪಸ್‌ನಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಿ ವಿದ್ಯಾರ್ಥಿಗಳಿಗೆ ಸಮಾಲೋಚನೆಗಳನ್ನೂ ಏರ್ಪಡಿಸಿದೆ.