ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಹವಾಮಾನ ಕುರಿತು ಜಾಗೃತಿ ಮೂಡಿಸಿ, ಉತ್ತಮ ವಾತಾವರಣ ಹಾಗೂ ನಗರವನ್ನು ನಿರ್ಮಿಸುವಲ್ಲಿ ವಿದ್ಯಾರ್ಥಿಗಳನ್ನು ಭಾಗಿದಾರರನ್ನಾಗಿ ಮಾಡುವುದು ಹವಾಮಾನ ಕ್ರಿಯಾಬಳಗದ ರಚನೆಯ ಉದ್ದೇಶವೆಂದು ಎಫ್ಇಸಿಸಿ ವಿಭಾಗದ ವಿಶೇಷ ಆಯುಕ್ತ ಪ್ರೀತಿ ಗೆಹ್ಲೋಟ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕತಚೇರಿಯ ಆವರಣದಲ್ಲಿರುವ ನೌಕರರ ಭವನದಲ್ಲಿ ಪಾಲಿಕೆಯ ಹವಾಮಾನ ಕ್ರಿಯಾ ಕೋಶವು ಆಯೋಜಿಸಿದ್ದ ಬೆಂಗಳೂರು ಹವಾಮಾನ ಕ್ರಿಯಾ ಬಳಗಗಳ ಸಮ್ಮಿಲನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಾಲೆ, ಮನೆ ಮತ್ತು ಸಮುದಾಯ ಮಟ್ಟದ ನಡವಳಿಕೆಯಲ್ಲಿ ಬದಲಾವಣೆ ತರಬೇಕಿದೆ. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಾಮಾಜಿಕ ಸಬಲೀಕರಣದಂತೆ, ಹವಾಮಾನ ಜವಾಬ್ದಾರಿಯೂ ಸಹ ತಾನಾಗಿಯೇ ಬರುವ ಅಭ್ಯಾಸವಾಗಬೇಕು. ಇದುವರೆಗೆ 700ಕ್ಕೂ ಹೆಚ್ಚಿನ ಸರ್ಕಾರಿ ಹಾಗೂ ಖಾಸಗಿ ಶೈಕ್ಷಣಿಕ ಸಂಸ್ಥೆಗಳು ನೋಂದಣಿ ಮಾಡಿಕೊಂಡಿದ್ದು, 73 ಸಂಸ್ಥೆಗಳಲ್ಲಿ ಕ್ರಿಯಾ ಬಳಗವನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಹವಾಮಾನ ಕ್ರಿಯಾ ಬಳಗಕ್ಕೆ ಸೇರಿ:
ಹಸಿರು ಬೆಂಗಳೂರು ನಿರ್ಮಾಣದಲ್ಲಿ ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳುವ ಅವಕಾಶವನ್ನು ನೀಡಲು ಬೆಂಗಳೂರು ಹವಾಮಾನ ಕ್ರಿಯಾ ಬಳಗಗಳನ್ನು ರಚಿಸಲು ಬೆಂಗಳೂರಿನ ಎಲ್ಲಾ ಶಾಲೆಗಳು https://bengaluruclimateactionclubs.in/ ಈ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಕನ್ನಡ ಮತ್ತು ಇಂಗ್ಲಿಷ್ ಎರಡ ಭಾಷೆಯಲ್ಲೂ ಲಭ್ಯವಿದೆ.
ಫೆಸಿಲಿಟೇಟರ್ ಹ್ಯಾಂಡ್‌ಬುಕ್ ಬಿಡುಗಡೆ:
ವಿದ್ಯಾರ್ಥಿಗಳಿಗಾಗಿ ಹವಾಮಾನ ಕ್ರಿಯಾ ಬಳಗದ ಚಟುವಟಿಕೆಗಳ ಕುರಿತು ಮಾರ್ಗದರ್ಶನ ನೀಡುವ ಮಾರ್ಗದರ್ಶಕ ಕೈಪಿಡಿ(Facilitator Handbook)
ಅನ್ನು ಬಿಡುಗಡೆ ಮಾಡಲಾಯಿತು.
45ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿ:
ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚು ವಿದ್ಯಾ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹವಾಮಾನ ಬದಲಾವಣೆ ಕುರಿತಂತೆ ಮಹತ್ವದ ಅನಿಸಿಕೆ ಹಾಗೂ ಸಲಹೆಗಳನ್ನು ನೀಡಿದರು.
ಪ್ರತಿನಿಧಿಗಳ ಪ್ರಮುಖ ಅನಿಸಿಕೆ ಹಾಗೂ ಸಲಹೆಗಳು:
- ವಿದ್ಯಾರ್ಥಿಗಳು ಹೆಚ್ಚು ಆಸಕ್ತಿಯಿಂದ ಹವಾಮಾನ ಕ್ರಿಯಾಬಳಗವನ್ನು ಸೇರುತ್ತಿರುವುದು.
- ಬ್ಲೂ ಗ್ರೀನ್ ಅವಾರ್ಡ್ ಪರಿಸರ ಜಾಗೃತಿ ಹಾಗೂ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿ ತೋರುವಂತೆ ಮಾಡಿದೆ.
- ಕ್ರಿಯಾಬಳಗದ ಚಟುವಟಿಕೆಗಳಲ್ಲಿ ಭೌತಿಕ ಚಟುವಟಿಕೆಗಳನ್ನು ಸೇರಿಸುವುದರಿಂದ ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸಬಹುದು.
- ಪರಿಸರ ಜಾಗೃತಿ ಕುರಿತಾಗಿ ಮಕ್ಕಳು ಮಾತ್ರವಲ್ಲದೇ ಪೋಷಕರ ಮನಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆಯಿದೆ.
- ಶಾಲಾ-ಕಾಲೇಜುಗಳನ್ನು ಹೊರತಾಗಿ ಹೆಚ್ಚು ತ್ಯಾಜ್ಯವನ್ನು ಸೃಷ್ಟಿಸುವ ಕಾರ್ಖಾನೆ, ಆಸ್ಪತ್ರೆಗಳಲ್ಲಿ ಕೂಡ ಹವಾಮಾನ ಕ್ರಿಯಾ ಬಳಗವನ್ನು ರಚಿಸುವುದು ಮುಖ್ಯ.
ಈ ವೇಳೆ ಸಿಎಂಸಿಎ ಸಹ ಸಂಸ್ಥಾಪಕಿ ಹಾಗೂ ಸಿಇಒ ಪ್ರಿಯಾ ಕೃಷ್ಣಮೂರ್ತಿ, ವಿವಿಧ ವಲಯಗಳ ಜಿಲ್ಲಾ ಉಪನಿರ್ದೇಶಕರು ಮತ್ತು ಜಿಲ್ಲಾ ಉಪಯೋಜನಾ ಸಂಯೋಜಕರು, ಮಕ್ಕಳ ನಾಗರಿಕ ಜಾಗೃತಿ ಚಳವಳಿ, ಹವಾಮಾನ ಶಿಕ್ಷಣ ತಜ್ಞರ ಜಾಲ, ಥಿಕೆಟ್ ಟೆಲ್ಸ್ ಮತ್ತು ಡಬ್ಲ್ಯೂಆರ್ ಐ ಕಾರ್ಯಕಾರಿ ಗುಂಪುಗಳು ಹಾಗೂ ವಿವಿಧ ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.



















