ಬಾಲಸೋರ್: ಉಪನ್ಯಾಸಕನ ಲೈಂಗಿಕ ಕಿರುಕುಳದಿಂದ ನೊಂದು ವಿದ್ಯಾರ್ಥಿನಿಯೊಬ್ಬಳು ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ಒಡಿಶಾದಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದೆ. ಒಡಿಶಾದ ಬಾಲಸೋರ್‌ನಲ್ಲಿ ನಡೆದಿರುವ ಈ ಹೃದಯ ವಿದ್ರಾವಕ ಘಟನೆ ಇಡೀ ರಾಜ್ಯವನ್ನೇ ಕೆರಳಿಸಿದೆ. ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿ ಸೌಮ್ಯಾಶ್ರೀ ಬಿಸಿ, ತನ್ನ ಕಾಲೇಜಿನ ಶಿಕ್ಷಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿ, ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಮನನೊಂದು ಜುಲೈ 12ರಂದು ತನಗೆ ತಾನೇ ಬೆಂಕಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು.
ಶೇ.95ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಆಕೆ ಜುಲೈ 14 ರ ರಾತ್ರಿ ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈ ಘಟನೆ ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ವಿರೋಧ ಪಕ್ಷಗಳಾದ ಕಾಂಗ್ರೆಸ್, ಬಿಜು ಜನತಾ ದಳ ಮತ್ತು ಇತರ ಎಂಟು ಪಕ್ಷಗಳು ಬುಧವಾರ ಒಡಿಶಾ ಬಂದ್‌ಗೆ ಕರೆ ನೀಡಿವೆ.
ಅನ್ಯಾಯದ ಬಲಿಗೆ ನ್ಯಾಯ ಯಾವಾಗ?
ಸೌಮ್ಯಾಶ್ರೀ ಎರಡನೇ ವರ್ಷದ ಬಿ.ಎಡ್. ವಿದ್ಯಾರ್ಥಿನಿಯಾಗಿದ್ದಳು. ತಾನು ಕಾಲೇಜಿನ ಶಿಕ್ಷಣ ವಿಭಾಗದ ಮುಖ್ಯಸ್ಥ ಸಮೀರ್ ಕುಮಾರ್ ಸಾಹು ಅವರಿಂದ ಆರು ತಿಂಗಳಿಗೂ ಹೆಚ್ಚು ಕಾಲ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಗಿ ಆಕೆ ಆರೋಪಿಸಿದ್ದಳು. ಈ ಕುರಿತು ಆಕೆ ಜುಲೈ 1ರಂದು ಕಾಲೇಜಿನ ಆಂತರಿಕ ದೂರು ಸಮಿತಿಗೆ ದೂರು ಸಲ್ಲಿಸಿದ್ದಳು. ಆದರೆ, ದೂರಿನ ಮೇಲೆ ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ಹತಾಶೆಗೊಂಡ ಸೌಮ್ಯಾಶ್ರೀ ಜುಲೈ 12 ರಂದು ಕಾಲೇಜು ಆವರಣದಲ್ಲಿ, ಪ್ರಾಂಶುಪಾಲರ ಕಚೇರಿಯ ಹೊರಗೆ ಪೆಟ್ರೋಲ್ ಸುರಿದು ತನ್ನನ್ನು ತಾನೇ ಸುಟ್ಟುಕೊಳ್ಳಲು ಯತ್ನಿಸಿದ್ದಳು.
ಈ ದುರಂತ ಪ್ರಯತ್ನದಲ್ಲಿ ಆಕೆಗೆ ಶೇ. 95ರಷ್ಟು ಸುಟ್ಟ ಗಾಯಗಳಾಗಿದ್ದವು. ತಕ್ಷಣ ಆಕೆಯನ್ನು ಬಾಲಸೋರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ದುರದೃಷ್ಟವಶಾತ್, ಜುಲೈ 14 ರ ರಾತ್ರಿ 11:46 ಕ್ಕೆ ಆಕೆ ಕೊನೆಯುಸಿರೆಳೆದಳು.
ರಾಜ್ಯಾದ್ಯಂತ ಪ್ರತಿಭಟನೆ:
ಆಕೆಯ ಸಾವಿನ ಸುದ್ದಿ ಹರಡುತ್ತಿದ್ದಂತೆ, ಬಾಲಸೋರ್‌ನಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿವೆ. ಬಿಜೆಡಿ, ಕಾಂಗ್ರೆಸ್ ಮತ್ತು ಇತರ ಎಂಟು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಇಂದು ಒಡಿಶಾ ಬಂದ್‌ಗೆ ಕರೆ ನೀಡಿವೆ. ಬಿಜೆಡಿ ಕಾರ್ಯಕರ್ತರು ಬಾಲಸೋರ್‌ನ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್‌ನಿಂದ ಬಾಲಸೋರ್‌ನ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಘಟನೆಯನ್ನು “ಇದು ಕೇವಲ ಆತ್ಮಹತ್ಯೆಯಲ್ಲ, ಇದು ವ್ಯವಸ್ಥೆಯಿಂದ ಆಗಿರುವ ಕೊಲೆ” ಎಂದು ಖಂಡಿಸಿದ್ದಾರೆ. ಸೌಮ್ಯಾಶ್ರೀ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ಮುಖ್ಯಮಂತ್ರಿಯ ಕಚೇರಿ, ಕೇಂದ್ರ ಸಚಿವರು ಮತ್ತು ಬಾಲಸೋರ್‌ನ ಸಂಸದರಿಗೂ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಅವರು ಉಲ್ಲೇಖಿಸಿದ್ದಾರೆ.
ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಹ ಈ ಘಟನೆಯನ್ನು “ಬಿಜೆಪಿಯ ವ್ಯವಸ್ಥೆಯಿಂದ ಆಗಿರುವ ಯೋಜಿತ ಕೊಲೆ” ಎಂದು ಖಂಡಿಸಿದ್ದಾರೆ. “ನ್ಯಾಯಕ್ಕಾಗಿ ಹೋರಾಡಿದ ಒಡಿಶಾದ ಮಗಳ ಸಾವು ಆತ್ಮಹತ್ಯೆಯಲ್ಲ, ಬದಲಿಗೆ ಬಿಜೆಪಿಯಿಂದ ಆಗಿರುವ ವ್ಯವಸ್ಥಿತ ಕೊಲೆ,” ಎಂದು ಹೇಳಿದ್ದಾರೆ.
ಒಡಿಶಾದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ವಿದ್ಯಾರ್ಥಿನಿಯ ಕುಟುಂಬಕ್ಕೆ 20 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದು, ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಮಧ್ಯೆ, ಬಾಲಸೋರ್ ಪೊಲೀಸರು ಆರೋಪಿಯಾದ ಶಿಕ್ಷಣ ವಿಭಾಗದ ಮುಖ್ಯಸ್ಥ ಸಮೀರ್ ಕುಮಾರ್ ಸಾಹು ಮತ್ತು ಕಾಲೇಜಿನ ಪ್ರಾಂಶುಪಾಲ ದಿಲೀಪ್ ಕುಮಾರ್ ಘೋಷ್ ಅವರನ್ನು ಬಂಧಿಸಿದ್ದಾರೆ. ಇಬ್ಬರನ್ನೂ 14 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಅಲ್ಲದೆ, ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ 24 ಗಂಟೆಗಳ ಒಳಗೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ ಕಾಯಿದೆ 2013ರ ಅಡಿಯಲ್ಲಿ ಆಂತರಿಕ ಸಮಿತಿಗಳನ್ನು ರಚಿಸಲು ಒಡಿಶಾ ಸರ್ಕಾರ ಸೂಚನೆ ನೀಡಿದೆ.
ಸೌಮ್ಯಾಶ್ರೀ ತನ್ನ ಟ್ವೀಟರ್ ಖಾತೆಯಲ್ಲಿ, “ನನಗೆ ನ್ಯಾಯ ಸಿಗದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ,” ಎಂದು ಈ ಹಿಂದೆಯೇ ಬರೆದಿದ್ದಳು. ಈ ಪೋಸ್ಟ್ ಆಕೆಯ ನಿರಾಶೆ ಮತ್ತು ಅಸಹಾಯಕತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಅನೇಕರು ಕಾಲೇಜು ಆಡಳಿತ ಮತ್ತು ಸರ್ಕಾರದ ನಿಷ್ಕ್ರಿಯತೆಯನ್ನು ಖಂಡಿಸಿದ್ದಾರೆ.



















