ದಾವಣಗೆರೆ: ಜಾತಿ ಮಠಗಳಿಂದ ಸಮಾಜ ಕಲುಷಿತ ಎಂಬ ರಂಭಾಪುರಿ ಶ್ರೀಗಳ ಹೇಳಿಕೆಯನ್ನು ದಲಿತ ಮಠಾಧೀಶರ ಒಕ್ಕೂಟ ಖಂಡಿಸಿದೆ. ಈ ಬಗ್ಗೆ ದಾವಣಗೆರೆಯಲ್ಲಿ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದ ಅಧ್ಯಕ್ಷ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಯಿತು.
ಕಳೆದ ಎರಡು ದಿನಗಳ ಹಿಂದೆ ರಂಭಾಪುರಿ ಶ್ರೀಗಳು ಭದ್ರಾವತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾತಿಮಠಗಳಿಂದ ಸಮಾಜ ಕಲುಷಿತಗೊಳ್ಳುತ್ತದೆ ಎಂಬ ಹೇಳಿಕೆ ನೀಡಿದ್ದರು.
ಗಾಜಿನ ಮನೆಯಲ್ಲಿ ಕುಳಿತು ಇನ್ನೊಂದು ಮನೆಗೆ ಕಲ್ಲು ಒಡೆಯುವ ಕೆಲಸ ಮಾಡಬಾರದು. ಹಿರಿಯರಾಗಿದ್ದು ಯೋಚನೆ ಮಾಡಿ ಮಾತನಾಡಬೇಕಿತ್ತು. ಅವರು ಯಾವ ಸಮುದಾಯದ ಸ್ವಾಮೀಜಿ ಅಂತಾ ತಿಳಿದು ಮಾತನಾಡಬೇಕಿತ್ತು. ಸಂಕುಚಿತ ಭಾವನೆಯಿಂದ ಹೊರಗೆ ಬಂದು ಮಾತನಾಡಬೇಕು. ಇತ್ತೀಚೆಗೆ ನಡೆದ ಶೃಂಗಸಭೆಯಲ್ಲಿ ಅವರವರ ಜಾತಿಯವರೇ ಸೇರಿರುತ್ತಾರೆ. ಇದೇ ರೀತಿ ಹೇಳಿಕೆ ಮುಂದುವರಿಸಿದ್ರೆ ಉಗ್ರ ಹೋರಾಟ ಮಾಡ್ತೀವಿ ಎಂದು ಕೋಶಾಧ್ಯಕ್ಷ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಇದೇ ವೇಳೆ ಮಾದಾರ ಪೀಠದ ಸ್ವಾಮೀಜಿ ಮಾತನಾಡಿ, ನಮ್ಮ ದೇಶದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಇದೆ. ಆರೋಗ್ಯಪೂರ್ಣ ಸಮಾಜ ಕಟ್ಟುವುದು ನಮ್ಮ ಪೀಠದ ಉದ್ದೇಶ. ಎಲ್ಲಾ ಸಮುದಾಯದ ನಾಯಕರ ಜೊತೆ ನಾವೆಲ್ಲಾ ಕಾರ್ಯಕ್ರಮ ಮಾಡ್ತಿದ್ದೇವೆ. ಜಾತಿ ಮಠಗಳು ಸಮಾಜ ಕಲುಷಿತ ಎಂಬ ಹೇಳಿಕೆ ನಾವೆಲ್ಲ ಶ್ರೀಗಳು ಖಂಡಿಸುತ್ತೇವೆ ಎಂದು ಹೇಳಿದರು.


















