ತುಮಕೂರು: ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ಜರುಗಿಸುತ್ತೇವೆ ಎಂದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಜಾಪ್ರಭುತ್ವ ದಿನಾಚರಣೆ ಯಶಸ್ವಿಯಾಗಿದೆ.
ಸಂವಿಧಾನ ನಮ್ಮೆಲ್ಲರಿಗೂ ಜೀವನ ಕೊಟ್ಟಿದೆ. ಪ್ರಪಂಚದಲ್ಲಿ ನಮ್ಮದು ಶ್ರೇಷ್ಠ ಸಂವಿಧಾನ ಎಂದು ಹೇಳಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಬಂದಾಗ ನಾವು ಬಗೆಹರಸುತ್ತಿದ್ದೇವೆ. ವಿರೋಧ ಪಕ್ಷಗಳು ಸರ್ಕಾರದ ಅನೇಕ ತಪ್ಪುಗಳನ್ನು ಎತ್ತಿ ಹಿಡಿಯುವ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ತಪ್ಪುಗಳು ನಮ್ಮ ಆಡಳಿತ ಅವಧಿಯಲ್ಲಿ ನಡೆದಿದಿದ್ದರೆ ತನಿಖೆ ಮಾಡುವುದರಲ್ಲಿಯೂ ನಾವು ಹಿಂದೇಟು ಹಾಕುವುದಿಲ್ಲ.
ಯಾರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿ, ನಾವು ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವಾಲ್ಮೀಕಿ ಹಗರಣ ಗೊತ್ತಾದ ಕೂಡಲೇ ನಾವು ಕ್ರಮ ಜರುಗಿಸಿದ್ದೇವೆ. ಸಚಿವರು ಕೂಡಲೇ ರಾಜೀನಾಮೆ ನೀಡಿದ್ದಾರೆ. ತಕ್ಷಣವೇ ತಂಡ ರಚನೆ ಮಾಡಿ ತನಿಖೆಗೆ ಆದೇಶಿಸಿದ್ದೇವೆ. ಆನಂತರ ಪೊಲೀಸ್ ಇಲಾಖೆಯಲ್ಲಿ ಎಸ್ ಐಟಿ ತನಿಖೆ ಮಾಡುತ್ತಿದೆ. ಕೇಂದ್ರ ಸರ್ಕಾರ ಕೂಡ ಸಿಬಿಐ, ಇಡಿ ಕಳುಹಿಸಿದೆ. ಆ ತನಿಖೆಯೂ ನಡೆಯುತ್ತಿದೆ. ಮುಚ್ಚಿಡದೆ ನಾವು ಕ್ರಮ ಜರುಗಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಹಿಂದಿನ ಸರ್ಕಾರದಲ್ಲಿ ನಡೆದಂತಹ ದೊಡ್ಡ ಕೋಮುಗಲಭೆ, ಗಲಾಟೆಗಳಾಗಲಿ, ಅಥವಾ ಬೇರೆ ಬೇರೆ ರೀತಿಯಾಗಿ ನಡೆದಂತಹ ದೊಂಬಿ ಗಲಾಟೆಗಳಾಗಲಿ, ರಾಜಕೀಯ ದುರುದ್ದೇಶದಿಂದ ಆದಂತಹ ಗಲಾಟೆಗಳಾಗಲಿ ಯಾವೂದ ನಮ್ಮ ಅವಧಿಯಲ್ಲಿ ನಡೆದಿಲ್ಲ. ಮುಂದೆಯೂ ಸಹ ಯಾರಾದರೂ ನಮ್ಮ ರಾಜ್ಯದಲ್ಲಿ ಶಾಂತಿ ಹಾಳು ಮಾಡಲು ಮುಂದಾದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದಾರೆ.
ಶಾಸಕರೊಬ್ಬರು ಒಂದು ಸಮುದಾಯದ ಒಂದು ಜಾತಿಯ ಹೆಸರು ಹೇಳಿ ಆ ವ್ಯಕ್ತಿಗಳಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಅವರು ಜೈಲು ಪಾಲಾಗಿದ್ದಾರೆ. ನಾನು ಆ ರೀತಿಯಾಗಿ ಹೇಳಿಲ್ಲ. ಪೆನ್ ಡ್ರೈವ್, ಸಿಡಿ, ಆಡಿಯೋ ನನ್ನದಲ್ಲ ಅಂದಿದ್ದಾರೆ. ಆ ಕುರಿತು ಪೊಲೀಸರು ತನಿಖೆ ನಡೆಸುತ್ತಾರೆ ಎಂದು ಹೇಳಿದ್ದಾರೆ.