ರಾಮನಗರ: ರಾಜ್ಯದಲ್ಲಿ ಈಗಷ್ಟೇ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಫಲಿತಾಂಶವೊಂದೇ ಬಾಕಿ ಇದೆ. ಈ ಕ್ಷೇತ್ರಗಳ ಪೈಕಿ ಚನ್ನಪಟ್ಟಣ ಕ್ಷೇತ್ರ ಎಲ್ಲರನ್ನೂ ಆಕರ್ಷಿಸಿತ್ತು. ಈ ಕ್ಷೇತ್ರ ಎನ್ ಡಿಎ ಹಾಗೂ ಕಾಂಗ್ರೆಸ್ ನ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಈ ಜಿದ್ದು ಹಣದ ಹೊಳೆಗೂ ಕಾರಣವಾಗಿದೆ ಎಂಬ ಮಾತು ಈಗ ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಘಟಾನುಘಟಿ ನಾಯಕರ ದಂಡೆ ಹರಿದು ಬಂದು ಪ್ರಚಾರ ನಡೆಸಿತ್ತು. ಇಲ್ಲಿ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನ ನಡೆದಿದೆ. ಶೇ. ಶೇ.88.81ರಷ್ಟು ಮತದಾನ ನಡೆದಿದೆ. ಇದೇ ಮೊದಲ ಬಾರಿಗೆ ಇಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತದಾನ ನಡೆದಿದೆ. 2018ರಲ್ಲಿ ಶೇ.86.86ರಷ್ಟು ಮತದಾನವಾಗಿದ್ದು ದಾಖಲೆಯಾಗಿತ್ತು.
ಈ ಚುನಾವಣೆಯಲ್ಲಿ ಪ್ರತಿ ಮತಗಳಿಗೆ ಭಾರೀ ಪ್ರಮಾಣದಲ್ಲಿ ಹಣ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕನಿಷ್ಟ 3 ಸಾವಿರದಿಂದ ಗರಿಷ್ಟ 5 ಸಾವಿರದ ವರೆಗೂ ಹಣ ಹಂಚಿಕೆ ನಡೆದಿದೆ. 2 ಪಕ್ಷಗಳಿಂದ ಒಬ್ಬ ಮತದಾರರಿಗೆ 10 ಸಾವಿರ ರೂ.ಗಳವರೆಗೂ ಹಣ ಸಂದಾಯವಾಗಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಅಂದರೆ, ಕ್ಷೇತ್ರದಲ್ಲಿ ಸುಮಾರು 200 ಕೋಟಿ ರೂ.ಗೂ ಅಧಿಕ ಹಣ ಹಂಚಿಕೆಯಾಗಿದೆ ಎನ್ನಲಾಗುತ್ತಿದೆ.
ಐದಾರು ಮತಗಳಿರುವ ಕುಟುಂಬದಲ್ಲಿ ಸಾವಿರಾರು ರೂ. ಹಣ ಹರಿದು ಬಂದಿದ್ದು, ಮತದಾರರು ಅಗತ್ಯ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಕೊನೆಗೆ ಮತದಾರ ಯಾರಿಗೆ ಜೈ ಎಂದಿದ್ದಾನೆ ಎನ್ನುವುದನ್ನು ಮಾತ್ರ ಕಾಯ್ದು ನೋಡಬೇಕಿದೆ.