ಬೆಂಗಳೂರು: ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳಿಗೆ ಆಹಾರ ಹಾಕಿ ಪೋಷಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಈ ಮಧ್ಯೆ ಮಹಿಳೆಯೊಬ್ಬರು ಆಹಾರ ಹಾಕುವವರನ್ನು ತರಾಟೆಗೆ ತೆಗೆದುಕೊಂಡು ಬಿಬಿಎಂಪಿಗೆ ದೂರು ನೀಡಿದ್ದಾರೆ.
ಜಯನಗರದ 7ನೇ ಬ್ಲಾಕ್ ನಲ್ಲಿ ನಡೆದಿದ್ದು, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಸುಷ್ಮಾ ಅಯ್ಯಂಗಾರ್ ಎಂಬ ಎಕ್ಸ್ ಖಾತೆ ಬಳಕೆದಾರರು ನಾಯಿಗಳಿಂದ ತಮಗಾಗುತ್ತಿರುವ ಸಮಸ್ಯೆ ಕುರಿತು ಟ್ವೀಟ್ ಮಾಡಿ, ಬಿಬಿಎಂಪಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ.
ನೆರೆಹೊರೆಯವರು ಬೀದಿ ನಾಯಿಗಳಿಗೆ ಆಹಾರ ಹಾಕುವುದನ್ನು ಪರವಾನಗಿ ಪಡೆದಂತೆ ನಡೆದುಕೊಳ್ಳುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ನಮ್ಮ ಪ್ರದೇಶದಲ್ಲಿ ಬೀದಿ ನಾಯಿಗಳು ಇರಲಿಲ್ಲ. ಈಗ ಹೊಸದಾಗಿ ಬಂದ ಬಾಡಿಗೆದಾರರಿಂದ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ಮನೆಯ ಪ್ರದೇಶದಲ್ಲಿ ಸುಮಾರು 15-20 ನಾಯಿಗಳಿವೆ. ಅವಗಳನ್ನು ಬೇರೆಡೆಗೆ ಸ್ಥಳಾಂತರಿಸಿ. ಮನೆಯ ಸುತ್ತಮುತ್ತ 5ರಿಂದ 10 ವರ್ಷದವರೆಗಿನ ಮಕ್ಕಳಿದ್ದಾರೆ. ಅವರು ಆಟವಾಡಲು ರಾತ್ರಿ ಮನೆಯಿಂದ ಹೊರಬರಲು ಭಯಪಡುವಂತಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಬಿಬಿಎಂಪಿ ಉತ್ತರಿಸಿದ್ದು, ನಾಯಿಗಳನ್ನು ಸ್ಥಳಾಂತರಿಸುವುದಾಗಲಿ ಹಾಗೂ ಕೊಲ್ಲುವುದಾಗಲಿ ಆ ಹಕ್ಕು ನಮಗಿಲ್ಲ ಎಂದು ಹೇಳಿದೆ.