ಕಣ್ಣೂರು : ರೈಲಿನ ಮೇಲೆ ಕಲ್ಲು ತೂರಿದ್ದರಿಂದ ಓರ್ವ ಪ್ರಯಾಣಿಕ ಗಾಯಗೊಂಡ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಕಣ್ಣೂರು ದಕ್ಷಿಣ ಮತ್ತು ತಲಶ್ಶೇರಿ ನಿಲ್ದಾಣಗಳ ನಡುವೆ ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲಿನ ಮೇಲೆ ಸೋಮವಾರ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, 40 ವರ್ಷದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಕಣ್ಣೂರು ದಕ್ಷಿಣ ನಿಲ್ದಾಣದಿಂದ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಹೊರಟ ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ತೆರೆದ ಕಿಟಕಿಯ ಮೂಲಕ ಎಸ್ 7 ಸ್ಲೀಪರ್ ಕೋಚ್ಗೆ ಬಿದ್ದ ಕಲ್ಲುಗಳಲ್ಲಿ ಒಂದು 40 ವರ್ಷದ ಅರುಣ್ ಎಂಬವರ ಕೈಗೆ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಕೈಯಲ್ಲಿದ್ದ ಫೋನ್ ಸಂಪೂರ್ಣ ಹಾನಿಗೊಳಗಾಗಿದೆ. ಅರುಣ್ ಅವರ ಹೇಳಿಕೆಯನ್ನು ದಾಖಲಿಸಲಾಗಿದೆ. ಈ ಕುರಿತು FIR ದಾಖಲಿಸಿಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ.