ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿ ಮೂರು ಕಡೆ ಬಿಎನ್‌ಎಸ್ 163 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಫೆ.19ರ ಮಧ್ಯರಾತ್ರಿಯಿಂದ ಫೆ.24ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ವಿಧಿಸಿ ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ್ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ 4 ಕ್ಕಿಂತ ಹೆಚ್ಚು ಜನ ಕೂಡಿ ತಿರುಗಾಡುವುದಕ್ಕೆ ನಿಷೇಧ ಹೇರಲಾಗಿದೆ. ಅಪಾಯಕಾರಿ ಶಸ್ತ್ರಾಸ್ತ್ರ ಹಿಡಿದು ಓಡಾಡೋದು, ಸುರಕ್ಷತೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆ ಮಾಡುವುದು, ಅನುಮತಿ ಇಲ್ಲದೇ ಯಾವುದೇ ಸಭೆ-ಸಮಾರಂಭ ನಡೆಸುವುದು, ಧರಣಿ ನಡೆಸುವುದಕ್ಕೆ ನಿಷೇಧ ವಿಧಿಸಲಾಗಿದೆ.
ಶಿವಾಜಿ ಜಯಂತಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು ತೂರಾಟವಾಗಿತ್ತು. ಪೊಲೀಸರ ಮೇಲೂ ಕಲ್ಲು ಬಿದ್ದಿತ್ತು. ಎಸ್‌ಪಿ ಸಿದ್ದಾರ್ಥ ಗೋಯೆಲ್ ಅವರಿಗೆ ಕಲ್ಲು ಬಿದ್ದಿರುವ ಶಂಕೆಯಿದ್ದು, ಎಸ್‌ಪಿ ಬಟ್ಟೆ ಮೇಲೆ ರಕ್ತದ ಕಲೆ ಇತ್ತು. ಬಾಗಲಕೋಟೆಯ ಕಿಲ್ಲಾ ಓಣಿಯಲ್ಲಿ ಘಟನೆ ನಡೆದಿದೆ. ಮಸೀದಿ ಕಡೆಯಿಂದ ಕಲ್ಲು ತೂರಿ ಬಂದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಕಲ್ಲು ತೂರಾಟ ವಿರೋಧಿಸಿ ರಸ್ತೆಯಲ್ಲಿ ಯುವಕರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಿಲ್ಲಿಸಿ ಯುವಕರನ್ನು ಪೊಲೀಸರು ಕಳುಹಿಸಿದರು. ಸ್ಥಳದಲ್ಲಿ ಪರಿಸ್ಥಿತಿಯನ್ನು ಶಾಂತಿಗೊಳಿಸಿದರು. ಕಲ್ಲೆಸದವರನ್ನು ಬಂಧಿಸಬೇಕು. ಐಜಿಪಿ ಸ್ಥಳಕ್ಕೆ ಬರಬೇಕು. ಇಲ್ಲದಿದ್ದರೆ ಬಾಗಲಕೋಟೆ ಬಂದ್‌ಗೆ ಕರೆ ನೀಡುತ್ತೇವೆ ಎಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದರು.

ಘಟನೆ ಕುರಿತು ಮಾತನಾಡಿರುವ ಬಾಗಲಕೋಟೆ ಎಸ್‌ಪಿ ಸಿದ್ಧಾರ್ಥ ಗೋಯೆಲ್, ಶಿವಾಜಿ ಜಯಂತಿ ಮೆರವಣಿಗೆ ವೇಳೆ ಮಸೀದಿ ಕಡೆ ಬಂದಾಗ ಎರಡು ಕಲ್ಲು ಬಿದ್ದಿದೆ. ಅದು ಪೊಲೀಸರಿಗೆ ಮಾತ್ರ ಬಿದ್ದಿದೆ. ಸಾರ್ವಜನಿಕರಿಗೆ ಬಿದ್ದಿಲ್ಲ. ಕಲ್ಲು ತೂರಾಟ ಆದ ವೇಳೆ ಶೋಭಾಯಾತ್ರೆ (ಪ್ರೊಷೆಷನ್) ಬರ್ತಿರಲಿಲ್ಲ. ಪೋಸಲಿರ ಮೇಲೆ ಎರಡು ಹಾಗೂ ನನ್ನ ಭುಜಕ್ಕೆ ಒಂದು ಕಲ್ಲು ಬಿದ್ದಿದೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ. ವಿಡಿಯೋಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲ ಗಮನಿಸಿ ಯಾರು ಕಲ್ಲೆಸೆದಿದ್ದಾರೆ ಅವರನ್ನು ಬಂಧಿಸುತ್ತೇವೆ. ನಗರದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದು ಯಾವುದೇ ಪೂರ್ವ ನಿಯೋಜಿತ ಕೃತ್ಯ ಅಲ್ಲ. ಶಾಂತತೆ ಕದಡಿದವ್ರು ಯಾರೇ ಇದ್ರು ಅವ್ರ ಮೇಲೆ ಕ್ರಮ ಜರುಗಿಸ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು | ರಾಂಗ್ ವೇನಲ್ಲಿ ಬಂದು ರೋಡ್ ಬ್ಲಾಕ್ ಮಾಡಿದ ಆಟೋ ಚಾಲಕ



















