ನವದೆಹಲಿ: ದೇಶದಲ್ಲಿ ಮತ್ತೆ ಎರಡು ರಾಜ್ಯಗಳ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲರ ಚಿತ್ತ ದೆಹಲಿ ಮತ್ತು ಬಿಹಾರದತ್ತ ಎನ್ನುವಂತಾಗಿದೆ.
ಎರಡು ರಾಜ್ಯಗಳ ಚುನಾವಣೆಯೊಂದಿಗೆ ಎಂಟು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಇದರೊಂದಿಗೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ಕೂಡಾ 2025ರಲ್ಲಿ ನಡೆಯಲಿದೆ.
ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬೇಕು ಎನ್ನುವ ಕಾಂಗ್ರೆಸ್ ನಾಯಕರ ನಿಲುವಿಗೆ, ಇಂಡಿಯಾ ಮೈತ್ರಿಕೂಟದಲ್ಲೇ ಪೂರ್ಣ ಪ್ರಮಾಣದ ಬೆಂಬಲ ಸಿಗುತ್ತಿಲ್ಲ. ಹೀಗಾಗಿ ಬ್ಯಾಲೆಟ್ ಪೇಪರ್ ಅಭಿಯಾನ ನಡೆಸಲು ಮುಂದಾಗಿದ್ದ ಕಾಂಗ್ರೆಸ್, ಸದ್ಯದ ಮಟ್ಟಿಗೆ ಅದಕ್ಕೆ ತಡೆ ನೀಡಿದೆ. ಈ ಮಧ್ಯೆ ಚುನಾವಣೆ ಎದುರಾಗುತ್ತಿದ್ದು, ಮತ್ತೆ ತಂತ್ರ- ಪ್ರತಿತಂತ್ರ, ಆರೋಪ- ಪ್ರತ್ಯಾರೋಪಗಳು ಆರಂಭವಾಗಿವೆ.
ದೆಹಲಿಯ ಈಗಿನ ವಿಧಾನಸಭೆಯ ಅವಧಿ ಫೆ. 24ಕ್ಕೆ ಮುಕ್ತಾಯಗೊಳ್ಳಲಿದೆ. ಬಿಹಾರದ ಚುನಾವಣೆ ಅಕ್ಟೋಬರ್ – ನವೆಂಬರ್ ನಲ್ಲಿ ನಡೆಯಬೇಕಿದೆ. ಈ ಎರಡೂ ರಾಜ್ಯಗಳ ಚುನಾವಣೆಗಳು ಎನ್ ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಪಾಲಿಗೆ ಹೆಚ್ಚಿನ ಮಹತ್ವ ಪಡೆದಿವೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ, ಸತತವಾಗಿ ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿದೆ. 2015ರಲ್ಲಿ 67 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, 2020ರ ಚುನಾವಣೆಯಲ್ಲಿ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ ಇಲ್ಲಿ ವಿರೋಧ ಪಕ್ಷಗಳು ಹೀನಾಯ ಸೋಲು ಕಂಡಿದ್ದವು.
ಬಿಹಾರದಲ್ಲೂ ವರ್ಷಾಂತ್ಯಕ್ಕೂ ಮುನ್ನ ಚುನಾವಣೆ ನಡೆಯಬೇಕಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಇಂಡಿಯ ಮೈತ್ರಿಕೂಟದ ಭಾಗವಾಗಿದ್ದರೂ ಅಲ್ಲಿ ಕಾಂಗ್ರೆಸ್ ಮತ್ತು ಆಪ್ ಪ್ರತ್ಯೇಕವಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿವೆ.
243 ಸದಸ್ಯ ಬಲದ ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ಒಂದು ಕಡೆ ಹಾಗೂ ಕಾಂಗ್ರೆಸ್ – ಆರ್ ಜೆಡಿ ಮಧ್ಯೆ ಪೈಪೋಟಿ ಕಂಡು ಬಂದಿತ್ತು. ಎನ್ ಡಿಎ ಮೈತ್ರಿಕೂಟ 125 ಸ್ಥಾನದಲ್ಲಿ ( ಬಿಜೆಪಿ 72, ಜೆಡಿಯು 43) ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಮಹಾಘಟಬಂಧನ್ 110 (ಆರ್ಜೆಡಿ 75, ಕಾಂಗ್ರೆಸ್ 19) ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಈಗ ಮತ್ತೆ ಈ ರಾಜ್ಯಗಳು ಚುನಾವಣೆಗೆ ತೆರೆದುಕೊಳ್ಳುತ್ತಿವೆ.