ಬೆಂಗಳೂರು: ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು (ಸಿಎಸ್‌ಆರ್) ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ವಲಯದ ಪ್ರಗತಿಗೆ ಹೆಚ್ಚು ಬಳಕೆ ಮಾಡಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಲಹೆ ನೀಡಿದ್ದಾರೆ.
ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಅತಿ ಹೆಚ್ಚು ಹಣ ಖರ್ಚು ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಸಿಎಸ್ ಆರ್ ನಿಧಿಯಡಿ 2023-24ರಲ್ಲಿ 2,500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ದೇಶಾದ್ಯಂತ ಸಿಎಸ್ಆರ್ ಅಡಿಯಲ್ಲಿ ಒಟ್ಟು 34,000 ಕೋಟಿ ರೂ. ಉಪಯೋಗ ಮಾಡಲಾಗಿದೆ. ಇದು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ) ಆಯೋಜಿಸಿದ್ದ ಭಾರತ ಸಿಎಸ್‌ಆರ್ ಮತ್ತು ಸುಸ್ಥಿರತೆ ಪ್ರಶಸ್ತಿಗಳಲ್ಲಿ ಮಾತನಾಡಿದ ಪರಂ, ರಾಜ್ಯದ ಬಹುತೇಕ ಪ್ರತಿಯೊಂದು ಹಳ್ಳಿಯಲ್ಲೂ ಶಾಲೆಗಳಿದ್ದರೂ, ಗುಣಮಟ್ಟದ ಶಿಕ್ಷಣ ಅತ್ಯಂತ ತುರ್ತು ಅಗತ್ಯವಾಗಿದೆ ಎಂದು ಒತ್ತಿ ಹೇಳಿದ್ದಾರೆ. ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಸಾಫ್ಟ್ ವೇರ್ ರಫ್ತಿನಲ್ಲಿ ಕರ್ನಾಟಕ ಗಮನಾರ್ಹ ಪ್ರಗತಿ ಸಾಧಿಸಿದೆ. ದೇಶದ ಐಟಿ ರಫ್ತಿನಲ್ಲಿ ಸುಮಾರು ಶೇ. 40 ರಷ್ಟು ಕೊಡುಗೆ ನೀಡಿದೆ ಎಂದು ಅವರು ಹೇಳಿದ್ದಾರೆ.
ಹೂಡಿಕೆದಾರರಲ್ಲಿ ಕರ್ನಾಟಕದಲ್ಲಿ ಹೆಚ್ಚುತ್ತಿರುವ ಆಕರ್ಷಣೆಯನ್ನು ಸೂಚಿಸಿದ ಗೃಹ ಸಚಿವರು, ಮಂಗಳೂರು ಈಗ ಹೂಡಿಕೆಗೆ ಎರಡನೇ ಅತ್ಯಂತ ಆಕರ್ಷಕ ನಗರವಾಗಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಸಿಎಸ್‌ಆರ್ ನಿಧಿ ಬಳಕೆ ವಿಚಾರದಲ್ಲಿ ದಶಕದ ಹಿಂದೆಯೇ ಕಾನೂನು ಜಾರಿಗೊಂಡಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನ, ಕೃಷಿ, ಆರೋಗ್ಯ, ಶಿಕ್ಷಣ ವಲಯದಲ್ಲಿ ಮುಂಚೂಣಿಯಲ್ಲಿದೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ರೂಪಿಸಿದ ನೀತಿಗಳು ಫಲ ನೀಡಿ ಬೆಂಗಳೂರು ನಗರ ಸಾಫ್ಟ್‌ವೇರ್ ರಫ್ತು ವಲಯದಲ್ಲಿ ಪ್ರಮುಖ ನಗರವಾಗಿ ಹೊರ ಹೊಮ್ಮಿದೆ. ಕಡಿಮೆ ಖರ್ಚಿನಲ್ಲಿ ಆರೋಗ್ಯ ಸೇವೆಗಳು ಲಭಿಸುತ್ತಿವೆ ಎಂದು ಹೇಳಿದ್ದಾರೆ.