ಬೆಂಗಳೂರು: ಪಾರ್ಕಿಂಗ್ ತೆರಿಗೆಯಲ್ಲಿ ಬಿಬಿಎಂಪಿ ಕಳ್ಳಾಟ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕಮರ್ಷಿಯಲ್ ಕಟ್ಟಡಗಳಿಗೆ, ಮಾಲ್ ಗಳಿಗೆ ಕಾಂಗ್ರೆಸ್ ಸರ್ಕಾರ ದೊಡ್ಡ ಮಟ್ಟದ ಅನುಕೂಲ ಮಾಡಿಕೊಟ್ಟಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇಲ್ಲಿಯವರೆಗೆ ಕಮರ್ಷಿಯಲ್ ಕಟ್ಟಡಗಳಿಗೆ ಅಸ್ತಿ ತೆರಿಗೆಯಲ್ಲಿ ಶೇ. 50ರಷ್ಟು ಪಾರ್ಕಿಂಗ್ ತೆರಿಗೆ ವಿಧಿಸಲಾಗುತ್ತಿತ್ತು. ಆದರೆ, ಈಗ ಕಮರ್ಷಿಯಲ್ ಕಟ್ಟಡಗಳಿಗೆ ಚದರ ಅಡಿ ಗೆ ಕೇವಲ 3 ರೂ. ನಿಗದಿ ಮಾಡಲಾಗಿದೆ. ಈ ಮೂಲಕ ಕಮರ್ಷಿಯಲ್ ಕಟ್ಟಡಗಳಲ್ಲಿ ಪಾರ್ಕಿಂಗ್ ಲಾಟ್ ಹೆಸರಿನಲ್ಲಿ ಲೂಟಿ ಮಾಡಲು ಮುಂದಾಗಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕಮರ್ಷಿಯಲ್ ಕಟ್ಟಡಗಳಿಗೆ ಸರ್ಕಾರ ಮಣಿಯಿತೇ? ಎಂಬ ಅನುಮಾನ ಈಗ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಸಚಿವರ ಕೈವಾಡದಿಂದಾಗಿ ಈ ರೀತಿಯಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಕಮರ್ಷಿಯಲ್ ಹಾಗೂ ಮಾಲ್ ಗಳಲ್ಲಿ ವಾಹನ ಪಾರ್ಕಿಂಗ್ ಮಾಡುವುದಾದರೆ ಗಂಟೆಗೆ ಇಂತಿಷ್ಟು ಅಂತ ಹಣ ಸಂಗ್ರಹ ಮಾಡಲಾಗುತ್ತಿತ್ತು. ಉದಾಹರಣೆಗೆ, ಮಾಲ್ ಗಳಲ್ಲಿ ದ್ವಿಚಕ್ರ ವಾಹನದ ಪಾರ್ಕಿಂಗ್ ಗೆ ಒಂದು ಗಂಟೆಗೆ 30 ರಿಂದ 40 ರೂ. ವಸೂಲಿ ಮಾಡಲಾಗುತ್ತಿತ್ತು. ಕಾರ್ ಪಾರ್ಕಿಂಗ್ ಗೆ 60 ರೂ. ನಿಂದ 70 ರೂ. ವಸೂಲಿ ಮಾಡಲಾಗುತ್ತಿತ್ತು. ಆದರೆ, ಈಗ ಪಾರ್ಕಿಂಗ್ ನಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ವಿನಿಯಾತಿ ನೀಡಲಾಗಿಲ್ಲ. ಕಮರ್ಷಿಯಲ್ ಕಟ್ಟಡಗಳಿಗೆ ಮಾತ್ರ ಈ ನೀತಿ ಲಾಭದಾಯಕವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಸಾರ್ವಜನಿಕ ಕಟ್ಟಡಗಳಿಗೆ ಈ ರೀತಿ ಪಾರ್ಕಿಂಗ್ ದರ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.