ಬೆಂಗಳೂರು: ಎಸ್‌ಸಿ ಉಪಜಾತಿಗಳ ಜೊತೆ ಕ್ರಿಶ್ಚಿಯನ್ ಹೆಸರು ಇರುವ 13 ಜಾತಿಗಳ ಹೆಸರಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, 13 ಹೆಸರುಗಳ ಜಾತಿ ಪಟ್ಟಿಯನ್ನು ಸಮೀಕ್ಷೆಯಿಂದ ಕೈಬಿಡುವಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಬಿಜೆಪಿ ನಿಯೋಗ ಆಗ್ರಹ ಮಾಡಿದೆ.
ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಯವರು ರಾಜ್ಯ ಸರ್ಕಾರದ ಜಾತಿಣಗತಿ ನಿನ್ನೆಯಿಂದ ಶುರುವಾಗಿದ್ದು ಗೊಂದಲದ ಗೂಡಾಗಿದೆ ಎಂದು ಕಿಡಿಕಾರಿದರು. ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಯಾದವ ಈ ಜಾತಿಗಳ ಜತೆ ಸೇರಿಸಿದ್ದ ಕ್ರಿಶ್ಚಿಯನ್ ಹೆಸರಿನ ಜಾತಿಗಳನ್ನು, ಆ್ಯಪ್‌ನಲ್ಲಿ ಹೈಡ್ ಮಾಡಿದ್ದಾರೆ. ಅದೇ ರೀತಿ ಪರಿಶಿಷ್ಟ ಜಾತಿಗಳ ಜತೆ ಕ್ರಿಶ್ಚಿಯನ್ ಹೆಸರಿನ 15 ಜಾತಿಗಳ ಹೆಸರುಗಳನ್ನು ಹೈಡ್ ಮಾಡಿಲ್ಲ. ಈ ಬಗ್ಗೆ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ನಾವು ಪ್ರಶ್ನೆ ಮಾಡಿದ್ದೇವೆ. ಮೂಲಜಾತಿಗಳಲ್ಲೇ ಸವಲತ್ತು ಕೊಡುವ ಬಗ್ಗೆ ಸಮೀಕ್ಷೆ ನಂತರ ತೀರ್ಮಾನ ಮಾಡುತ್ತಾರಂತೆ, ಈ ಬಗ್ಗೆ ತೀರ್ಮಾನ ಮಾಡಲು ಇವರು ಯಾರು? ದಲಿತ ಕ್ರೈಸ್ತ ಅಂತ ಇದ್ದರೆ ಸವಲತ್ತು ಸಿಗಲ್ಲ, ಇವರಲ್ಲೇ ಸಾಕಷ್ಟು ಗೊಂದಲಗಳಿವೆ ಎಂದು ಛಲವಾದಿ ಕಿಡಿಕಾರಿದರು.
ಹಿಂದುಳಿದ ವರ್ಗಗಳ ಆಯೋಗ ಹಿಂದೂ ವಿರೋಧ ನೀತಿಯನ್ನು ಅನುಸರಿಸುತ್ತಿದೆ. ಇವರ ರಿಮೋಟ್ ಕಂಟ್ರೋಲ್ ಬೇರೆ ಕಡೆ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.ಮತಾಂತರ ಆಗಿದ್ರೆ ಮತಾಂತರಗೊಂಡ ಧರ್ಮದ ಹೆಸರನ್ನೇ ಬರೆದುಕೊಳ್ಳಿ. ದಲಿತ ಕ್ರಿಶ್ಚಿಯನ್ ಜಾತಿಗಳ ಹೆಸರು ತಂದ್ರೆ ರಾಜ್ಯದಲ್ಲಿ ನಮ್ಮ ಸಮುದಾಯಗಳು ಸಮೀಕ್ಷೆ ನಡೆಯಲು ಬಿಡಲ್ಲವೆಂದು ಎಚ್ಚರಿಕೆ ನೀಡಿದರು. ಕ್ರಿಶ್ಚಿಯನ್ ಧರ್ಮಕ್ಕೆ ಹಿಂದುಳಿದ ವರ್ಗಗಳ ಆಯೋಗ ದಳ್ಳಾಳಿ ಕೆಲಸ ಮಾಡ್ತಿದೆಯಾ? ದಲಿತ ಸಮುದಾಯಗಳ ಜತೆ ಕ್ರಿಶ್ಚಿಯನ್ ಹೆಸರಿನ ಜಾತಿಗಳ ಪಟ್ಟಿ ಸಂಜೆಯೊಳಗೆ ಕೈಬಿಡಬೇಕು, ಇಲ್ಲದಿದ್ದರೆ ನಾವು ಹೋರಾಟ ಮಾಡುತ್ತೇವೆಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬಿಜೆಪಿ ನಿಯೋಗಕ್ಕೆ ಮಧುಸೂದನ್ ನಾಯ್ಕ್ ತಿರುಗೇಟು
ಬಿಜೆಪಿ ನಿಯೋಗ ಭೇಟಿ ಮಾಡಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಬಿಜೆಪಿಯವರು ತಪ್ಪು ಕಲ್ಪನೆ ಮಾಡಿಕೊಂಡು ಬಂದು ನನ್ನನ್ನು ಭೇಟಿಯಾಗಿದ್ದರು ಎಂದು ಹೇಳಿದ್ದಾರೆ. 14 ಪರಿಶಿಷ್ಟ ಜಾತಿಗಳ ಹೆಸರು ಕ್ರಿಶ್ಚಿಯನ್ ಜೊತೆ ಇದೆ, ಯಾಕೆ ತೆಗೆದುಹಾಕಿಲ್ಲ ಅಂತ ನಮ್ಮನ್ನು ಪ್ರಶ್ನೆ ಕೇಳಿದ್ರು. ಬಿಜೆಪಿ ನಿಯೋಗ ತೋರಿಸಿದ 14 ಎಸ್‌ಸಿ ಜಾತಿಗಳನ್ನು ಕ್ರಿಶ್ಚಿಯನ್ ಜೊತೆ ನಾವು ಸೇರಿಸಿಲ್ಲ. ಬಿಜೆಪಿ ನಾಯಕರು ಹೇಳಿರುವ ಕ್ರಿಶ್ಚಿಯನ್ ಜೋಡಿತ ಪಟ್ಟಿಯೇ ಇಲ್ಲ, ಇವು ಯಾವುದೂ ನಮ್ಮ ಪಟ್ಟಿಯಲ್ಲಿಯೇ ಇಲ್ಲ, ನಮ್ಮ ಪಟ್ಟಿಯಲ್ಲೇ ಇಲ್ಲ ಅಂದಾದ ಮೇಲೆ ತೆಗೆದುಹಾಕುವ ಪ್ರಶ್ನೆಯೇ ಇಲ್ಲ ಎಂದು ಮಧುಸೂದನ್ ನಾಯ್ಕ್ ಅವರು ಹೇಳಿದ್ದಾರೆ. ಸಾಮಾಜಿಕ ಆರ್ಥಿಕ ಸಮೀಕ್ಷೆ ಶುರುವಾಗಿದೆ, ಚೆನ್ನಾಗಿ ನಡೀತಿದೆ. ಗೊಂದಲ, ತಾಂತ್ರಿಕ ಸಮಸ್ಯೆಗಳ ಬಗ್ಗೆ ನಿರ್ವಹಿಸಲು ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.