ಮೈಸೂರು: ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳ ಆರೈಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಬೇಜವಾಬ್ದಾರಿತನದ ಆಡಳಿತದಿಂದ ಸಾಕಷ್ಟು ಪ್ರಾಣಿಗಳನ್ನು ಕಳೆದುಕೊಂಡಿದ್ದು, ಈ ವರ್ಷದಲ್ಲಿಯೇ 6 ಹುಲಿಗಳ ಹತ್ಯೆಯಾಗಿದೆ ಎಂದು ಮೈಸೂರು ಸಂಸದ ಯದುವೀರ್ ಒಡೆಯರ್ ಅಸಮಧಾನ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸಂಸದರು, ಇತ್ತೀಚೆಗೆ ಮಹದೇಶ್ವರಬೆಟ್ಟ ವನ್ಯಧಾಮದಲ್ಲಿ 5 ಹುಲಿಗಳಿಗೆ ವಿಷಹಾಕಿ ಕೊಲೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ನೋವಿನ ಸಂಗತಿ ನಡೆದಿದೆ ಎಂದಿದ್ದಾರೆ.
ಸಂಸದ ಯದುವೀರ್ ಪೋಸ್ಟ್ ನಲ್ಲಿ ಏನಿದೆ?
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟ ವನ್ಯ ಧಾಮದಲ್ಲಿ ಹೆಣ್ಣು ಹುಲಿಯೊಂದನ್ನು ದುಷ್ಕರ್ಮಿ ಗಳು ಬರ್ಬರವಾಗಿ ಹತ್ಯೆ ಮಾಡುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದಾರೆ. ಇತ್ತೀಚೆಗೆ ಮಹದೇಶ್ವರಬೆಟ್ಟ ವನ್ಯಧಾಮದ ಹೂಗ್ಯಂ ಅರಣ್ಯ ಪ್ರದೇಶದಲ್ಲಿ 5 ಹುಲಿಗಳನ್ನು ವಿಷ ಪ್ರಾಶನ ಮಾಡುವ ಮೂಲಕ ಕೊಲ್ಲಲಾಗಿತ್ತು, ಅದರ ಬೆನ್ನಲ್ಲೇ ಮತ್ತೊಂದು ಹುಲಿಯನ್ನು ಕೊಲೆ ಮಾಡಿರುವುದು ಅತ್ಯಂತ ನೋವಿನ ಸಂಗತಿ. ಈ ವರ್ಷದಲ್ಲಿ 6 ಹುಲಿಗಳ ಹತ್ಯೆಯಾಗಿದ್ದರೂ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಹಿಂದೆ ನಡೆದ ಘಟನೆಗಳಿಂದಾದರೂ ಪಾಠ ಕಲಿತು, ಈ ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಅಧಿಕಾರಿಗಳು ತೀವ್ರ ನಿಗಾ ವಹಿಸುತ್ತಾರೆ ಎಂದು ಭಾವಿಸಿದ್ದೇವು, ಅದು ಕೂಡ ಹುಸಿಯಾಗಿದೆ.
ವನ್ಯ ಜೀವಿಗಳ ಸಂರಕ್ಷಣೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ ಸರ್ಕಾರ ತನ್ನ ಕರ್ತವ್ಯವನ್ನು ನಿರ್ವಹಿಸಲು ನಾವು ಎಷ್ಟೇ ಮನವಿ ಮಾಡಿದರೂ ಮತ್ತೆ ಈ ರೀತಿಯ ಆವಾಂತರಗಳು ನಡೆಯುತ್ತಿರುವುದು ಬೇಸರ ತಂದಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆ. ವನ್ಯಜೀವಿಗಳ ಸಂರಕ್ಷಣೆಯ ವಿಷಯದಲ್ಲಿ ಎಂದಿಗೂ ನಿರ್ಲಕ್ಷ್ಯ ಬೇಡ ಎಂದು ಸಂಸದ ಯದುವೀರ್ ಆಗ್ರಹಿಸಿದ್ದಾರೆ.