ಬೆಂಗಳೂರು: ಇಂದು ವಿಧಾನಸೌಧದ ಕ್ಯಾಬಿನೆಟ್ ಹಾಲ್ ನಲ್ಲಿ ಬೆಳಗ್ಗೆ 11.30 ರಿಂದ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಸಂಪುಟದಲ್ಲಿ ನಡೆಯಬಹುದಾದ ಪ್ರಮುಖ ಚರ್ಚೆಗಳು :
ರಾಜ್ಯದಲ್ಲಿ 74.88 ಕೋಟಿ ವೆಚ್ಚದಲ್ಲಿ ಮೈಸೂರು, ದಾಸನಪುರ, ಕೋಲಾರದಲ್ಲಿ ಸಿಎನ್ ಜಿ ಪ್ಲಾಂಟ್ ನಿರ್ಮಾಣಕ್ಕೆ ಸಮ್ಮತಿ ಸೇರಿ ಮೂರು ಕಡೆಯ ಎಪಿಎಂಸಿಗಳಲ್ಲಿ ನಿರ್ಮಾಣದ ಕುರಿತು, ಹಾಗೂ ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ 618 ಕೋಟಿ ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಮಾತ್ರವಲ್ಲದೇ, ಕೊಡಗು ವೈದ್ಯಕೀಯ ವಿಜ್ಙಾನ ಸಂಸ್ಥೆಗೆ ಪೀಠೋಪಕರಣ ಮತ್ತು ಕಾರ್ಡಿಯಾಕ್ ಉಪಕರಣಕ್ಕೆ 10.89 ಕೋಟಿ ವೆಚ್ಚದ ಖರೀದಿಗೆ ಒಪ್ಪಿಗೆ ಸಾಧ್ಯತೆ ಇದೆ.
ಹಾಗೂ ಕಾರ್ಕಳದಲ್ಲಿ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ14 ಸೆಂಟ್ಸ್ ಜಾಗ ಒಪ್ಪಿಗೆ, ಶಿರಸಿಯ ಪ್ರಜಾಸೌಧಕ್ಕೆ ಮೂಲಸೌಕರ್ಯ ನಿರ್ಮಾಣ ಜೊತೆಗೆ ಅಗತ್ಯ ಪಿಠೋಪಕರಣಗಳ ಖರೀದಿಗೆ 16 ಕೋಟಿ ಅನುದಾನಕ್ಕೆ ಒಪ್ಪಿಗೆ. ಕಾರವಾರದಲ್ಲಿ ಪ್ರಜಾಸೌಧದ 5,6 ನೇ ಮಹಡಿಯ ಕಾಮಗಾರಿಗೆ 55 ಕೋಟಿ ಹೆಚ್ಚುವರಿ ಅನುದಾನ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ, ಅಥಣಿಯಲ್ಲಿ ಗಾಯರಾಣ ನಿರ್ಮಾಣಕ್ಕೆ ಸುಮಾರು 4 ಎಕರೆ ಭೂಮಿ ನೀಡಿಕೆ, ಮಹಾಲಕ್ಷ್ಮಿ ದೇವಸ್ಥಾನದವರಿಗೆ ಭೂಮಿ ನೀಡಿಕೆ. ಪಂಚಾಯತ್ ರಾಜ್ ವಿವಿಧ ಕಾಮಗಾರಿಗಳಿಗಾಗಿ 48 ಕೋಟಿ ಅನುದಾನ ಬಿಡುಗಡೆಯ ಬಗ್ಗೆ ಹಾಗೂ ರೋಣ ತಾಲೂಕಿನ 9 ಕೆರೆಗಳಿಗೆ ನೀರು ಪೂರೈಕೆ, ಮಲಪ್ರಭಾ ನದಿಯಿಂದ ನೀರು ಪೂರೈಸಲು 42.50 ಕೋಟಿ ಅನುದಾನಕ್ಕೆ ಒಪ್ಪಿಗೆ ಸಾಧ್ಯತೆ ಇದ್ದು, ಮಲಪ್ರಭಾ ಕಾಲುವೆಗಳ ಆಧುನೀಕರಣ ಹಾಗೂ ರೋಣದ ಬಳಿ ಅಧುನೀಕರಣಕ್ಕೆ 31 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.