ವಾಷಿಂಗ್ಟನ್/ಟೆಹ್ರಾನ್: ಅತ್ತ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೆ, ಇತ್ತ ಹಾರ್ಮುಜ್ ಜಲಸಂಧಿಯಲ್ಲಿ ಉಭಯ ದೇಶಗಳ ನೌಕಾಪಡೆಗಳು ಮುಖಾಮುಖಿಯಾಗಿದ ಘಟನೆ ಶನಿವಾರ ನಡೆದಿದೆ. ಶನಿವಾರ ಅಮೆರಿಕದ ಎರಡು ಯುದ್ಧನೌಕೆಗಳು ಈ ವಿವಾದಿತ ಜಲಸಂಧಿಯ ಮೂಲಕ ಸಾಗಲು ಪ್ರಯತ್ನಿಸಿದಾಗ, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅತ್ಯಂತ ಕಠಿಣ ಎಚ್ಚರಿಕೆಯನ್ನು ನೀಡುವ ಮೂಲಕ ಅಮೆರಿಕ ನೌಕೆಗಳ ಪ್ರಯತ್ನಕ್ಕೆ ತಡೆಯೊಡ್ಡಿದೆ.
ರೇಡಿಯೋ ಸಂಭಾಷಣೆಯಲ್ಲಿ ಮೊಳಗಿದ ಎಚ್ಚರಿಕೆ
ಅಮೆರಿಕದ ಕ್ಷಿಪಣಿ ವಿಧ್ವಂಸಕ ನೌಕೆಗಳಾದ ‘ಯುಎಸ್ಎಸ್ ಫ್ರಾಂಕ್ ಇ ಪೀಟರ್ಸನ್’ ಮತ್ತು ‘ಯುಎಸ್ಎಸ್ ಮೈಕೆಲ್ ಮರ್ಫಿ’ ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸಿದಾಗ, ಇರಾನ್ ಪಡೆಗಳು ರೇಡಿಯೋ ಮೂಲಕ ತೀವ್ರ ಪ್ರತಿರೋಧ ವ್ಯಕ್ತಪಡಿಸಿವೆ. “ಇದು ನಿಮಗೆ ಕೊನೆಯ ಎಚ್ಚರಿಕೆ, ಇದು ನಿಮಗೆ ಕೊನೆಯ ಎಚ್ಚರಿಕೆ” ಎಂದು ಇರಾನ್ ಪಡೆಗಳು ಗುಡುಗಿವೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕದ ನೌಕೆಯು, “ನಾವು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಸಂಚರಿಸುತ್ತಿದ್ದೇವೆ ಮತ್ತು ಕದನ ವಿರಾಮದ ನಿಯಮಗಳಿಗೆ ಬದ್ಧರಾಗಿದ್ದೇವೆ” ಎಂದು ಉತ್ತರಿಸಿದೆ ಎನ್ನಲಾಗಿದೆ.
ಜಲಸಂಧಿ ತೆರವುಗೊಳಿಸಲು ಅಮೆರಿಕ ಪಣ
ಕಳೆದ ಆರು ವಾರಗಳಿಂದ ಇರಾನ್ ಈ ಪ್ರಮುಖ ಸಮುದ್ರ ಮಾರ್ಗವನ್ನು ಬಂದ್ ಮಾಡಿದ್ದು, ಜಾಗತಿಕ ತೈಲ ಪೂರೈಕೆಯ ಮೇಲೆ ಭಾರಿ ಪರಿಣಾಮ ಬೀರಿದೆ. ವಿಶ್ವದ ಶೇ.20ರಷ್ಟು ಕಚ್ಚಾ ತೈಲ ಈ ಮಾರ್ಗದ ಮೂಲಕವೇ ಸಾಗಬೇಕಿದೆ. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ, ಅಮೆರಿಕದ ಸೆಂಟ್ರಲ್ ಕಮಾಂಡ್ ಹೊರ್ಮುಜ್ ಮಾರ್ಗವನ್ನು ಮರುಪ್ರಾರಂಭಿಸಲು ಮುಂದಾಗಿದೆ. ಇದಕ್ಕಾಗಿ ಸಮುದ್ರದೊಳಗಿನ ಡ್ರೋನ್ಗಳನ್ನು ಬಳಸಿ, ಇರಾನ್ ಹಾಕಿರುವ ಸಮುದ್ರ ಬಾಂಬ್ ತೆರವುಗೊಳಿಸುವ ಕಾರ್ಯಾಚರಣೆಯನ್ನು ಆರಂಭಿಸಿದೆ.
ಗೊಂದಲದಲ್ಲಿ ಇರಾನ್ ಪಡೆಗಳು?
ಕುತೂಹಲಕಾರಿ ವಿಷಯವೆಂದರೆ, ಇರಾನ್ ಪಡೆಗಳು ಸಮುದ್ರದಲ್ಲಿ ಅವೈಜ್ಞಾನಿಕವಾಗಿ ಸ್ಫೋಟಕಗಳನ್ನು ಅಳವಡಿಸಿದ್ದು, ಈಗ ಅವುಗಳ ನಿಖರವಾದ ಸ್ಥಳವನ್ನು ಪತ್ತೆಹಚ್ಚಲು ಅವರಿಗೇ ಸಾಧ್ಯವಾಗುತ್ತಿಲ್ಲ ಎಂದು ವರದಿಗಳು ತಿಳಿಸಿವೆ. ಮಾರ್ಗವನ್ನು ಬಂದ್ ಮಾಡಿರುವ ಕಾರಣದಿಂದಾಗಿ ಹಡಗುಗಳು ಇರಾನ್ ಜಲಪ್ರದೇಶದ ಮೂಲಕವೇ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಇರಾನ್ ಪ್ರತಿ ಹಡಗಿನ ಮೇಲೆ ಸುಮಾರು 2 ಮಿಲಿಯನ್ ಡಾಲರ್ ಸುಂಕ ವಿಧಿಸಲು ಪ್ರಸ್ತಾಪಿಸಿದೆ.
ಇಸ್ಲಾಮಾಬಾದ್ನಲ್ಲಿ ಶಾಂತಿ ಮಾತುಕತೆಗಳು ವಿಫಲವಾದ ಬೆನ್ನಲ್ಲೇ ಸಮುದ್ರದಲ್ಲಿ ನಡೆದ ಈ ಮುಖಾಮುಖಿಯು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ವಾಷಿಂಗ್ಟನ್ ಈ ಮಾರ್ಗವನ್ನು ಮುಕ್ತಗೊಳಿಸಲು ನಿರ್ಧರಿಸಿದ್ದರೆ, ಇರಾನ್ ತನ್ನ ನಿಯಂತ್ರಣವನ್ನು ಬಿಟ್ಟುಕೊಡಲು ತಯಾರಿಲ್ಲದಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಅಮೆರಿಕ-ಇರಾನ್ ಸಂಧಾನ ಮಾತುಕತೆ ವಿಫಲ – ಇಸ್ಲಾಮಾಬಾದ್ ಸಭೆಯಿಂದ ಹೊರನಡೆದ ಜೆ.ಡಿ. ವ್ಯಾನ್ಸ್



















