ಬೆಂಗಳೂರು: ಆರ್ ಸಿಬಿ ಸಂಭ್ರಮದಲ್ಲಿ ಸೂತಕ ಆವರಿಸಿ ಇಡೀ ಕನ್ನಡಿಗರು ಕಣ್ಣೀರು ಸುರಿಸುವಂತಾಗಿದೆ. ಈಗಾಗಲೇ ಪ್ರಕರಣವನ್ನು ತನಿಖೆಗೆ ವಹಿಸಲಾಗಿದೆ. ಐವರು ಅಧಿಕಾರಿಗಳನ್ನು ಅಮಾನತು ಕೂಡ ಮಾಡಲಾಗಿದೆ. ಈ ಮಧ್ಯೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.
ಕಾಲ್ತುಳಿತ ಪ್ರಕರಣದ ಬೆನ್ನಲ್ಲೇ ಐಪಿಎಸ್ ಶ್ರೇಣಿಯ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಕೆಲವು ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಗುಪ್ತಚರ ಇಲಾಖೆಯ ಎಡಿಜಿಪಿ ಹುದ್ದೆಗೆ ಎಸ್.ರವಿ ಅವರನ್ನು ನೇಮಿಸಲಾಗಿದೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿರುವ ಆರ್.ಹಿತೇಂದ್ರ ಅವರಿಗೆ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಲಾಜಿಸ್ಟಿಕ್ಸ್ ಮತ್ತು ಮಾಡರ್ನೈಜೇಶನ್ ಎಡಿಜಿಪಿ ಆಗಿರುವ ಮುರುಗನ್ ಅವರನ್ನು ನೇಮಕಾತಿ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ.
ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಕೆ.ವಿ.ಶರತ್ ಚಂದ್ರ ಅವರನ್ನು ಪೊಲೀಸ್ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ನೇಮಕ ಮಾಡಲಾಗಿದೆ. ಪೊಲೀಸ್ ಗೃಹ ನಿರ್ಮಾಣ ಮತ್ತು ಅಭಿವೃದ್ಧಿ ನಿಗಮದ ಎಡಿಜಿಪಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಹೊಣೆಯನ್ನು ಕೂಡ ವಹಿಸಲಾಗಿದೆ.