18 ವರ್ಷಗಳ ಬಳಿಕ ಅಂದು ಅಹಮದಾಬಾದ್ ನ ಮೋದಿ ಕ್ರೀಡಾಂಗಣದಲ್ಲಿ ಆರ್ಸಿಬಿ ಐಪಿಎಲ್ ಕಪ್ ಗೆ ಮುತ್ತಿಟ್ಟಿತ್ತು.
ದೇಶದೆಲ್ಲೆಡೆ ಸಂಭ್ರಮ ಕಳೆಗಟ್ಟಿತ್ತು. ಇತ್ತ ಕರ್ನಾಟಕದ ಗಲ್ಲಿ ಗಲ್ಲಿಯಲ್ಲೂ ವಿಜಯೋತ್ಸವ ಮುಗಿಲು ಮುಟ್ಟಿತ್ತು. ಅದರಲ್ಲೂ ಬೆಂಗಳೂರು ಅಂದು ಇಡೀ ದಿನ ಸಂಭ್ರಮದ ಜಾಗರಣೆ ಮಾಡಿತ್ತು. ಮುಂಜಾನೆ ಸಮಸ್ತ ವಿಜಯೀ ತಂಡ ಬೆಂಗಳೂರಿಗೆ ಬಂದಿಳಿದಿತ್ತು. ಆದರೆ ದುರ್ವಿಧಿ. 18 ವರ್ಷಗಳ ಕನಸು ಕೇವಲ 18 ನಿಮಿಷದಲ್ಲಿ ಸೂತಕದ ಕರಿ ಛಾಯೆಗೆ ಜಾರಿಬಿಟ್ಟಿತ್ತು.
ಹೌದು! ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಸಂಭ್ರಮೋತ್ಸವದಲ್ಲಿ ಭೀಕರ ಕಾಲ್ತುಳಿತ ಘಟಿಸಿತ್ತು.
ಈ ದುರಂತ 11 ಅಮಾಯಕ ಅಭಿಮಾನಿಗಳ ಜೀವವನ್ನು ಬಲಿ ಪಡೆದಿತ್ತು. ಈ ಘಟನೆ ಘಟಿಸಿ ಇಂದಿಗೆ ಒಂದು ತಿಂಗಳು ಗತಿಸಿದೆ. ಇನ್ನು ಈ ಕಾಲ್ತುಳಿತದಲ್ಲಿ ಪ್ರಾಣತೆತ್ತವರ ಕುಟುಂಬಕ್ಕೆ ಸರ್ಕಾರ ಸೇರಿದಂತೆ, ಆರ್ ಸಿಬಿ ಆಡಳಿತ ಮಂಡಳಿ ಮತ್ತು ಕೆಎಸ್ ಸಿಸಿ ಪರಿಹಾರ ಘೋಷಿಸಿತ್ತು.
ಆದರೆ, ಹೀಗೆ ಪರಿಹಾರ ಘೋಷಿಸಿ ಒಂದು ತಿಂಗಳು ಸತಾಯಿಸಿದ ಆರ್ ಸಿಬಿ ಮತ್ತು ಕೆಎಸ್ ಸಿಎ ಇಂದು ಅಂತಿಮವಾಗಿ ಚೆಕ್ ಹಸ್ತಾಂತರಿಸಿದ್ದಾರೆ. ಈಗಾಗಲೇ ಘಟನೆ ನಡೆದು ಒಂದು ತಿಂಗಳು ಗತಿಸಿದರೂ ಪರಿಹಾರ ನೀಡಲು ದಿನ ದೂಡುತ್ತಿದ್ದ ಇಬ್ಬರೂ ಇಂದು ಅಂತಿಮವಾಗಿ ಪರಿಹಾರ ಚೆಕ್ ಹಸ್ತಾಂತರಿಸಿದ್ದಾರೆ.