ಶಿವಮೊಗ್ಗ : ಶಿವಮೊಗ್ಗದ ಹೊರವಲಯದ ಸೂಳೆಬೈಲು ಸರಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ, ಅನ್ಯಕೋಮಿನ ಬಾಲಕರಿಂದ ಹಲ್ಲೆಗೀಡಾಗುತ್ತಿದ್ದ ತನ್ನ ಸ್ನೇಹಿತನನ್ನು ಬಿಡಿಸಲು ಹೋಗಿ ತಾನೇ ಜೀವ ತೆತ್ತಿದ್ದಾನೆ. ಘಟನೆಯಿಂದಾಗಿ, ಇರುವ ಒಬ್ಬ ಮಗನನ್ನು ಕಳೆದುಕೊಂಡ ಹೆತ್ತವರು ದೊಡ್ಡ ಆಘಾತಗೊಳಗಾಗಿದ್ದಾರೆ. ಅವರ ಅಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಸಾವಿನ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪರೀಕ್ಷೆಯ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪೆಶಲ್ ಕ್ಲಾಸ್ ತೆಗೆದುಕೊಳ್ಳಲಾಗುತ್ತಿತ್ತು. ಸೂಳೆಬೈಲು ಬಡಾವಣೆಯ ಸಂಕೇತ್ ಕ್ಲಾಸ್ ಮುಗಿಸಿಕೊಂಡು ವಾಪಸ್ ಮನೆಯತ್ತ ಹೋಗುವಾಗ ಸ್ನೇಹಿತ ಗಿರೀಶ್ ಮೇಲೆ ಅದೇ ಬಡಾವಣೆಯ ಐವರು ಬಾಲಕರು ಹಲ್ಲೆ ಮಾಡುತ್ತಿದ್ದುದನ್ನು ಕಂಡಿದ್ದಾನೆ.
ಗಿರೀಶ್ನನ್ನು ಬಚಾವ್ ಮಾಡಲು ಅಲ್ಲಿಗೆ ಸಂಕೇತ್ ಹೋಗಿದ್ದಾನೆ. ಆ ಐವರು ಬಾಲಕರು ಸಂಕೇತ್ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಂಕೇತ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಗಿರೀಶ್ ತನ್ನ ಮನೆಯವರಿಗೆ ಮತ್ತು ಅಕ್ಕಪಕ್ಕದವರಿಗೆ ಗಲಾಟೆ ಬಗ್ಗೆ ಮಾಹಿತಿ ಕೊಟ್ಟಿದ್ದಾನೆ. ಅಕ್ಕಪಕ್ಕದವರು ಅಲ್ಲಿಗೆ ಹೋಗಿ ನೋಡಿದಾಗ ಹಲ್ಲೆಗೊಳಗಾದ ಸಂಕೇತ್ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋದರು. ಆದರೆ ಮಾರ್ಗ ಮಧ್ಯೆಯೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.
ಸಂಕೇತ್ ಕುಸಿದು ಬೀಳುತ್ತಿದ್ದಂತೆಯೇ ಮೂವರು ಬಾಲಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ಮಾಡಿ ಕೊಲೆಗೆ ಕಾರಣವಾದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಕುರಿತು ತನಿಖೆಯು ಚುರುಕುಗೊಂಡಿದೆ.
ಇದನ್ನೂ ಓದಿ : ಅನಾಮಧೇಯ ವ್ಯಕ್ತಿಗಳಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ | ಸ್ಥಳದಲ್ಲೇ ಬೀಡು ಬಿಟ್ಟ ಪೊಲೀಸರು



















