ಯಡ್ರಾಮಿ : ಅದು ಇನ್ನೂ ಆಟ ಆಡುವ ವಯಸ್ಸು. ಈ ವಯಸ್ಸಿನಲ್ಲೇ ಪ್ರೀತಿ-ಪ್ರೇಮ ಅಂತಾ ಕಾಲ ಕಳೆದು ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಈಗ ಆತ್ಮಹತ್ಯೆಗೆ ಶರಮಾಗಿದ್ದಾರೆ. ಮಳ್ಳಿ ಗ್ರಾಮದ ಕೆಂಚಪ್ಪ ತೋಟಪ್ಪ ಪೂಜಾರಿ (16) ಹಾಗೂ ಅದೇ ಶಾಲೆ ಅನ್ಯಕೋಮಿನ ನಾಗರಹಳ್ಳಿ ಗ್ರಾಮದ ನಸೀಮಾ ಆಳಗೂರ (15)ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಸೀಮಾ ಶುಕ್ರವಾರ ರಾತ್ರಿ ಶೌಚಕ್ಕೆಂದು ಹೊರಗೆ ಹೋಗಿದ್ದವಳು ಮನೆಗೆ ಮರಳಿ ಬಂದಿರಲಿಲ್ಲ. ಅದೇ ರೀತಿಯಾಗಿ ತನ್ನ ಅಣ್ಣನ ಬೈಕ್‌ನಲ್ಲಿ ಹೊರಗೆ ಹೋಗಿದ್ದ ಕೆಂಚಪ್ಪ ಮಳ್ಳಿ ಮನೆಗೆ ಹಿಂದಿರುಗಿರಲಿಲ್ಲ. ಇಬ್ಬರೂ ಬೈಕ್ ನಲ್ಲಿ ಗ್ರಾಮದ ಹೊರವಲಯದ ಐನಾಪುರ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಜಮೀನಿಗೆ ಹೋಗಿ ಬೇವಿನ ಮರಕ್ಕೆ ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾರನೇ ದಿನ ರೈತರೊಬ್ಬರು ತಮ್ಮ ಹೊಲಕ್ಕೆ ಹೋಗಿದ್ದಾಗ ಈ ಘಟನೆ ನೋಡಿದ್ದಾರೆ. ಇತ್ತೀಚೆಗೆ ನಸೀಮಾಗೆ ವಿವಾಹ ನಿಶ್ಚಯ ಆಗಿತ್ತು. ಹೀಗಾಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಯಡ್ರಾಮಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.