ಬೆಂಗಳೂರು : ರಾಜ್ಯದಲ್ಲಿ 2025–26ನೇ ಸಾಲಿನ SSLC ಪರೀಕ್ಷೆಗಳು ನಾಳೆ (ಮಾ.18) ರಿಂದ ಆರಂಭವಾಗಲಿದೆ. ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಸಜ್ಜಾಗಿರುವ ಸಂದರ್ಭದಲ್ಲಿಯೇ, ಇಂದು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ದಿನವಾಗಿದ್ದು, ವಿದ್ಯಾರ್ಥಿಗಳು ಗಟ್ಟಿಯಾದ ನಿರೀಕ್ಷೆ ಮತ್ತು ತೀವ್ರ ಒತ್ತಡದ ಮಧ್ಯೆ ಇದ್ದಾರೆ. ವಿದ್ಯಾರ್ಥಿಗಳಿಗಾಗಿ ಸರ್ಕಾರವು ಉಚಿತ ಬಸ್ ಬಿಡುವುದಾಗಿ ತಿಳಿಸಿದೆ.
ಈ ಬಾರಿ ಒಟ್ಟು 9,02,889 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, ರಾಜ್ಯದಾದ್ಯಂತ 2,871 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ ಪಾರದರ್ಶಕ ಮತ್ತು ಅಕ್ರಮರಹಿತ ಪರೀಕ್ಷೆಯನ್ನು ನಿರ್ವಹಿಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ.
ಪ್ರಮುಖ ಕಟ್ಟುನಿಟ್ಟಿನ ನಿಯಮಗಳು:
- ಪ್ರವೇಶ ಪತ್ರವಿಲ್ಲದೆ ಕೇಂದ್ರ ಪ್ರವೇಶ ನಿಷೇಧ
- ಪರೀಕ್ಷೆ ಆರಂಭಕ್ಕೂ ಕನಿಷ್ಠ 30 ನಿಮಿಷ ಮುಂಚಿತವಾಗಿ ಹಾಜರಾಗಬೇಕು
- ಮೊಬೈಲ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು ನಿಷೇಧ
- ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಡ್ಡಾಯ
- ಅಕ್ರಮ ಕಂಡುಬಂದರೆ ತಕ್ಷಣ ಡಿಬಾರ್ ಕ್ರಮ
- ಶಾಲಾ ಸಮವಸ್ತ್ರ ಕಡ್ಡಾಯ
- ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ, ಸಮೀಪದ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಜಿಲ್ಲಾಡಳಿತ ಆದೇಶ
ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ:
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ ತೋರಿಸಿ ಈ ಸೌಲಭ್ಯವನ್ನು ಬಳಸಬಹುದು.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ:
- ಮಾರ್ಚ್ 18: ಪ್ರಥಮ ಭಾಷೆ
- ಮಾರ್ಚ್ 23: ವಿಜ್ಞಾನ, ರಾಜ್ಯಶಾಸ್ತ್ರ, ಸಂಗೀತ
- ಮಾರ್ಚ್ 25: ದ್ವಿತೀಯ ಭಾಷೆ
- ಮಾರ್ಚ್ 28: ಗಣಿತ, ಸಮಾಜಶಾಸ್ತ್ರ
- ಮಾರ್ಚ್ 30: ತೃತೀಯ ಭಾಷೆ, NSQF
- ಏಪ್ರಿಲ್ 02: ಸಮಾಜ ವಿಜ್ಞಾನ
ಸರಕಾರ ಮತ್ತು ಸಂಬಂಧಿತ ಅಧಿಕಾರಿಗಳು ಈ ಬಾರಿ ಪರೀಕ್ಷೆಯನ್ನು ಅಕ್ರಮರಹಿತವಾಗಿ ಹಾಗೂ ಸುಗಮವಾಗಿ ನಡೆಸಲು ಸಂಪೂರ್ಣ ಸಿದ್ಧತೆ ಕೈಗೊಂಡಿದ್ದು, ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ನಿಯಮ ಪಾಲಿಸಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕೆಂದು ಮಂಡಳಿ ವಿನಂತಿ ಮಾಡಿದೆ.
ಇದನ್ನೂ ಓದಿ : ಗ್ಯಾಸ್ ಸಿಲಿಂಡರ್ ಅಭಾವದಿಂದ ಒಕ್ಕಲಿಗರ ಸಂಘ ಸಭೆ ರದ್ದು



















