ಹೈದರಾಬಾದ್: ಎರಡು ದಿನಗಳ ಹಿಂದೆ ತೆಲಂಗಾಣದಲ್ಲಿ ನಿರ್ಮಾಣ ಹಂತದ ಸುರಂಗ ಭಾಗಶಃ ಕುಸಿದ ಪರಿಣಾಮ ಒಳಗೆ ಸಿಲುಕಿರುವ 8 ಕಾರ್ಮಿಕರ ರಕ್ಷಣೆಗಾಗಿ ಕಾರ್ಯಾಚರಣೆ ತೀವ್ರಗೊಂಡಿದೆ. ಆದರೆ, ಒಳಗಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ ಎಂದು ಸಚಿವ ಜೆ.ಕೃಷ್ಣ ರಾವ್ ಸೋಮವಾರ ಹೇಳಿದ್ದಾರೆ.
2023 ರಲ್ಲಿ ಉತ್ತರಾಖಂಡದ ಸಿಲ್ಕ್ಯಾರಾ ಬೆಂಡ್-ಬಾರ್ಕೋಟ್ ಸುರಂಗದಲ್ಲಿ ಸಿಲುಕಿದ್ದ ನಿರ್ಮಾಣ ಕಾರ್ಮಿಕರನ್ನು ರಕ್ಷಿಸಿ ಹೊರತರುವಲ್ಲಿ ಯಶಸ್ವಿಯಾಗಿದ್ದ ರಾಟ್-ಹೋಲ್ ಗಣಿಗಾರರ ತಂಡ(ಇಲಿ-ರಂಧ್ರ ಗಣಿಗಾರಿಕೆ) ತಂಡವನ್ನು ತೆಲಂಗಾಣಕ್ಕೆ ಕರೆಸಿಕೊಳ್ಳಲಾಗಿದ್ದು, ಅವರ ಮೂಲಕ ಸುರಂಗದೊಳಗೆ ಸಿಲುಕಿರುವವರನ್ನು ರಕ್ಷಿಸಲು ಸಾಧ್ಯವಾಗಬಹುದೇ ಎಂದು ಪ್ರಯತ್ನಿಸಲಾಗುತ್ತಿದೆ.
ಘಟನೆ ನಡೆದ ಸ್ಥಳದಲ್ಲಿ ಮಣ್ಣು ಕುಸಿದಿರುವ ಕಾರಣ, ಕೆಸರು ತುಂಬಿದ್ದು ರಕ್ಷಣಾ ತಂಡಕ್ಕೆ ಇದುವೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ರಕ್ಷಣಾ ಕಾರ್ಯಾಚರಣೆಯು ಅಂತಿಮ ಹಂತಕ್ಕೆ ತಲುಪಲು ಇನ್ನೂ 3-4 ದಿನಗಳು ಹಿಡಿಯಬಹುದು ಎಂದೂ ಸಚಿವರು ತಿಳಿಸಿದ್ದಾರೆ.
“ಪ್ರಾಮಾಣಿಕವಾಗಿ ಹೇಳುವುದಾದರೆ, ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಬಹಳಷ್ಟು ಕಡಿಮೆಯಿದೆ. ಏಕೆಂದರೆ, ನಾನು ಘಟನಾ ಸ್ಥಳದಿಂದ ಸುರಂಗದ ಕೊನೆಯವರೆಗೆ ಹೋಗಿದ್ದೇನೆ. ನಂತರ ಹೋಗಲು ಉಳಿದಿದ್ದು ಕೇವಲ 50 ಮೀಟರ್ ದೂರ ಮಾತ್ರ. ನಾವು ಫೋಟೋಗಳನ್ನು ಕ್ಲಿಕ್ಕಿಸಿದಾಗ ಸುರಂಗದ ಅಂತ್ಯವು ಗೋಚರಿಸುತ್ತಿತ್ತು. ಸುರಂಗದ 9 ಮೀಟರ್ ವ್ಯಾಸದಲ್ಲಿ ಸುಮಾರು 30 ಅಡಿ, ಆ 30 ಅಡಿಗಳಲ್ಲಿ 25 ಅಡಿಗಳವರೆಗೆ ಮಣ್ಣು ತುಂಬಿತ್ತು” ಎಂದು ಅವರು ಹೇಳಿದ್ದಾರೆ. ಅಲ್ಲೇ ನಿಂತು ನಾವು ಕಾರ್ಮಿಕರ ಹೆಸರುಗಳನ್ನು ಕೂಗಿ ಕರೆದೆವು. ಆದರೆ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಯಾರೊಬ್ಬರೂ ಬದುಕಿರುವ ಸಾಧ್ಯತೆ ಇಲ್ಲ” ಎಂದಿದ್ದಾರೆ.
48 ಗಂಟೆಗಳಿಂದಲೂ ಸಿಲುಕಿರುವ ಕಾರ್ಮಿಕರು
ತೆಲಂಗಾಣದ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಯೋಜನೆಯ ಸುರಂಗದ ಒಂದು ಭಾಗವು ಶನಿವಾರ ಕುಸಿದುಬಿದ್ದಿತ್ತು. ಸುರಂಗದಲ್ಲಿ ಸೋರಿಕೆ ಕಂಡುಬಂದ ಹಿನ್ನೆಲೆಯಲ್ಲಿ ದುರಸ್ತಿಗೆಂದು ಕಾರ್ಮಿಕರು ತೆರಳಿದ್ದಾಗ ಈ ಘಟನೆ ಸಂಭವಿಸಿತ್ತು. ಈ ದುರಂತ ನಡೆದು 48 ಗಂಟೆಗಳು ಕಳೆದರೂ, ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಇತರೆ ಸಂಸ್ಥೆಗಳ ನಿರಂತರ ಪ್ರಯತ್ನಗಳ ಹೊರತಾಗಿಯೂ ಒಳಗೆ ಸಿಲುಕಿರುವ ಎಂಟು ಜನರನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ ಯಾವುದೇ ಪ್ರಗತಿ ಸಾಧಿಸಲಾಗಿಲ್ಲ.
ಸುಧಾರಿತ ತಂತ್ರಜ್ಞಾನದ ಸಹಾಯದಿಂದ ರಕ್ಷಣಾ ಪ್ರಯತ್ನಗಳನ್ನು ತೀವ್ರಗೊಳಿಸಲು ಅಧಿಕಾರಿಗಳು ನಿರಂತರವಾಗಿ ಯತ್ನಿಸುತ್ತಿದ್ದಾರೆ. ಸುರಂಗ ಸ್ಥಳದಲ್ಲಿ ಎಂಡೋಸ್ಕೋಪಿಕ್ ಮತ್ತು ರೊಬೊಟಿಕ್ ಕ್ಯಾಮೆರಾಗಳನ್ನೂ ಅಳವಡಿಸಿದ್ದಾರೆ. ಕಾರ್ಯಾಚರಣೆಗೆ ಸಹಾಯ ಮಾಡಲು ಎನ್‌ಡಿಆರ್‌ಎಫ್ ಶ್ವಾನದಳವನ್ನು ಸಹ ನಿಯೋಜಿಸಿದೆ.
ಸಿಲುಕಿರುವವರು ಯಾರು?
48 ಗಂಟೆಗಳಿಂದಲೂ ಕುಸಿದ ಸುರಂಗದಲ್ಲಿ ಸಿಲುಕಿರುವವರನ್ನು ಉತ್ತರ ಪ್ರದೇಶದ ಮನೋಜ್ ಕುಮಾರ್ ಮತ್ತು ಶ್ರೀನಿವಾಸ್, ಜಮ್ಮು ಮತ್ತು ಕಾಶ್ಮೀರದ ಸನ್ನಿ ಸಿಂಗ್, ಪಂಜಾಬ್‌ನ ಗುರ್ಪ್ರೀತ್ ಸಿಂಗ್ ಮತ್ತು ಜಾರ್ಖಂಡ್ ಮೂಲದ ಸಂದೀಪ್ ಸಾಹು, ಜೆಗ್ಟಾ ಕ್ಸೆಸ್, ಸಂತೋಷ್ ಸಾಹು ಮತ್ತು ಅನುಜ್ ಸಾಹು ಎಂದು ಗುರುತಿಸಲಾಗಿದೆ. ಈ 8 ಮಂದಿಯ ಪೈಕಿ ಇಬ್ಬರು ಇಂಜಿನಿಯರ್‌ಗಳು, ಇಬ್ಬರು ಆಪರೇಟರ್‌ಗಳು ಮತ್ತು ಉಳಿದ ನಾಲ್ವರು ಕಾರ್ಮಿಕರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವಾರು ಯಂತ್ರೋಪಕರಣಗಳ ಸಹಾಯದೊಂದಿಗೆ ಅವಶೇಷಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವ ಕೃಷ್ಣ ರಾವ್ ತಿಳಿಸಿದ್ದಾರೆ.
“ಈಗಾಗಲೇ ಟನೆಲ್ ಬೋರಿಂಗ್ ಮಷೀನ್ ಮೂಲಕ ಕೆಸರನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಒಂದು ವೇಳೆ ಸಿಲುಕಿರುವ ಕಾರ್ಮಿಕರು ಈ ಯಂತ್ರದ ಕೆಳಭಾಗದ ಭೂಮಿಯಲ್ಲಿದ್ದಾರೆ ಎಂದು ಭಾವಿಸಿದರೂ, ಒಳಗೆ ಗಾಳಿ (ಆಮ್ಲಜನಕ) ಎಲ್ಲಿದೆ? ಆಮ್ಲಜನಕದ ಪಂಪಿಂಗ್ ಅನ್ನು ನಿರಂತರವಾಗಿ ನಡೆಸಲಾಗುತ್ತಿದ್ದರೂ, ಆಮ್ಲಜನಕವು ಅಷ್ಟು ಕೆಳಗೆ ಹೋಗಲು ಹೇಗೆ ಸಾಧ್ಯ” ಎಂದೂ ಅವರು ಪ್ರಶ್ನಿಸಿದ್ದಾರೆ.