ಚಿತ್ರದುರ್ಗ: ರಾಜ್ಯ ಬಿಜೆಪಿಯ ಜಗಳ ಹಾದಿ- ಬೀದಿ ರಂಪವಾಗಿ, ಬೀದಿಯ ಕಾಳಗವಾಗಿದೆ. ಆಡಳಿತ ಪಕ್ಷದ ವಿರುದ್ಧ ಗುಡುಗಬೇಕಿದ್ದ ಬಿಜೆಪಿ ನಾಯಕರು, ಈಗ ಪರಸ್ಪರ ತಮ್ಮವರ ವಿರುದ್ಧ ಆರೋಪಗಳ ಸುರಿಮಳೆ ಮಾಡುತ್ತಿದ್ದಾರೆ. ಒಬ್ಬರಿಗೊಬ್ಬರು ಟಾಂಗ್ ಕೊಡುತ್ತಾ ಜಗಳ ಮಾಡುತ್ತಿದ್ದಾರೆ. ಇದನ್ನು ಕಂಡು ಆಡಳಿತ ಪಕ್ಷ ಮುಸಿ ಮುಸಿ ನಗುತ್ತಿದೆ. ಯತ್ನಾಳ್- ವಿಜಯೇಂದ್ರ ಗುದ್ದಾಟದ ಮಧ್ಯೆ ರಾಮುಲು-ರೆಡ್ಡಿ ಫೈಟ್ ಶುರುವಾಗಿತ್ತು. ಈಗ ರಾಮುಲು ಅಧ್ಯಕ್ಷಗಿರಿ ಕುರ್ಚಿಯ ಮೇಲೆ ಕಣ್ಣಿಡುವ ವಿಷಯದವರೆಗೂ ಅದು ಬಂದು ನಿಂತಿದೆ.
ಸಂಸದ ಡಾ. ಕೆ ಸುಧಾಕರ್ (Dr K Sudhakar) ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕಾತಿ ವಿಷಯದಲ್ಲಿ ಬಿವೈ ವಿಜಯೇಂದ್ರ (Vijayendra) ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದು ಕೂಡ ಬಿಜೆಪಿ ಆಂತರಿಕ ಕಚ್ಚಾಟಕ್ಕೆ ಕಾರಣವಾಗಿತ್ತು. ಈ ವೇಳೆ ದೆಹಲಿ ಭೇಟಿಯ ವಿಷಯವಾಗಿ ಚಿತ್ರದುರ್ಗದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಮಾತನಾಡಿದ್ದು, ದೆಹಲಿ ಚುನಾವಣೆ ಸೇರಿದಂತೆ ಹಲವಾರು ಕಾರಣಗಳಿಗಾಗಿ ಹೋಗಲು ಆಗಿಲ್ಲ ಎಂದಿದ್ದಾರೆ.
ನಾನು BJP ಯಲ್ಲಿ ಇದ್ದೇನೆ. ಒಬ್ಬರಿಗೆ ನೋವಾದಾಗ ಬೇರೆ ಪಕ್ಷದವರು ಕರೆಯೋದು ಸಹಜ, ಎಲ್ಲಾ ಸ್ನೇಹಿತರು ಕೂಡಾ ಆಹ್ವಾನಿಸಿದ್ದಾರೆ. ಅದು ಅವರ ದೊಡ್ಡ ಗುಣ. ಆದರೆ ನಾನು ಯಾವುದೇ ಕಾರಣಕ್ಕೂ BJP ತೊರೆದು ಹೋಗುವುದಿಲ್ಲ. ನಾನು ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದೇನೆ. ನನಗೆ ಯಾವುದೇ ಸ್ಥಾನ ನೀಡಿದರೂ ಕೆಲಸ ಮಾಡುತ್ತೇನೆ. ರಾಮುಲು ಶಕ್ತಿ ಕೂಡ ಎಷ್ಟು ತೂಕ ಎಂದು ಫಿಕ್ಸ್ ಆಗಿದೆ. ರಾಜ್ಯಾಧ್ಯಕ್ಷ ಹುದ್ದೆ ಯತ್ನಾಳ್ ಆಗಬೇಕು.
ರಾಮುಲು ಆಗಬೇಕು. ವಿಜಯೇಂದ್ರ ಆಗಬೇಕು ಎಂದೆಲ್ಲ ಹೇಳುತ್ತಿದ್ದಾರೆ. ಈ ಎಲ್ಲ ಶಕ್ತಿಯ ಕುರಿತು ಚರ್ಚೆಗಳು ನಡೆಯುತ್ತಿವೆ. ನಾನು ಕೂಡ ಈ ಕುರಿತು ಹೈಕಮಾಂಡ್ ಮುಂದೆ ಹೇಳುತ್ತೇನೆ. ಪಕ್ಷದಲ್ಲಿ ಯಾವುದೇ ಸ್ಥಾನ ಕೊಟ್ಟರೂ ಕೆಲಸ ಮಾಡುತ್ತೇನೆ. ಆಕಸ್ಮಿಕವಾಗಿ ರಾಜ್ಯಾಧ್ಯಕ್ಷ ಹುದ್ದೆ ಸಿಕ್ಕರೂ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ವಿಜಯೇಂದ್ರ ಕುರ್ಚಿಯ ಮೇಲೆ ಕಣ್ಮಿಟ್ಟಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.