ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ವತಿಯಿಂದ ಆಗಸ್ಟ್ 1ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವಕ್ಕೆ ಜು. 25ರಂದು ಸಂಜೆ 4.30ಕ್ಕೆ ಮಠದ ರಾಜಾಂಗಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಚಾಲನೆ ನೀಡಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದ್ದಾರೆ.
ಆ. 15ರಂದು ಚಾಂದ್ರ ಶ್ರೀಕೃಷ್ಣ ಜನ್ಮಾಷ್ಟಮಿ, ಸೆ. 14ರಂದು ಸೌರ ಶ್ರೀಕೃಷ್ಣ ಜನ್ಮಾಷ್ಟಮಿ, 15ರಂದು ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ. ಮಂಡಲೋತ್ಸವದ ಅಂಗವಾಗಿ ಸೆ. 14ರಂದು ನಡೆಯುವ ಕಾರ್ಯಕ್ರಮದಲ್ಲಿ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ ಪಾಲ್ಗೊಳ್ಳಲಿದ್ದಾರೆ. ಕೃಷ್ಣಾಷ್ಟಮಿ ಅಂಗವಾಗಿ ಕೃಷ್ಣನಿಗೆ ಇಷ್ಟವಾದ ಉಡುಗೊರೆಗಳನ್ನು ಭಕ್ತರು ಸಮರ್ಪಿಸಬಹುದು ಎಂದು ಹೇಳಿದ್ದಾರೆ.
45 ದಿನಗಳ ಕಾಲ ನಡೆಯಲಿರುವ ಮಂಡಲೋತ್ಸವದ ಅಂಗವಾಗಿ ಧ್ಯಾನ ಮಂಡಲೋತ್ಸವ, ಕೊಳಲು ಮಂಡಲೋತ್ಸವ, ಭಜನಾ ಮಂಡಲೋತ್ಸವ, ಸ್ಪರ್ಧಾ ಹಾಗೂ ಸಾಂಸ್ಕೃತಿಕ ಮಂಡಲೋತ್ಸವ ನಡೆಯಲಿದೆ. ನಾಟಕ, ಯಕ್ಷಗಾನ, ಭರತನಾಟ್ಯ, ಕ್ರೀಡಾ ಸ್ಪರ್ಧೆಗಳು, ಕೋಟಿ ಶ್ರೀಕೃಷ್ಣಮಂತ್ರ ಜಪ ಅಭಿಯಾನ ಜರುಗಲಿವೆ ಎಂದು ಹೇಳಿದ್ದಾರೆ.