ಢಾಕಾ : ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಯಾವುದೇ ಹಿಂಸಾಚಾರ ನಡೆದಿಲ್ಲ ಎಂದು ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ಹೇಳಿದ್ದು, ಅಂತಹ ವರದಿಗಳನ್ನು ಭಾರತವು ಹರಡುತ್ತಿರುವ “ಸುಳ್ಳು ಸುದ್ದಿ” ಎಂದು ತಳ್ಳಿಹಾಕಿದ್ದಾರೆ. “ಸುಳ್ಳು ಸುದ್ದಿ ಹರಡುವುದು ಸದ್ಯಕ್ಕೆ ಭಾರತದ ವಿಶೇಷತೆಗಳಲ್ಲಿ ಒಂದಾಗಿದೆ” ಎಂದೂ ಆರೋಪಿಸುವ ಮೂಲಕ ಅವರು ಉದ್ಧಟತನ ಮೆರೆದಿದ್ದಾರೆ.
ಕಳೆದ ವಾರ ಅಮೆರಿಕದ ಪತ್ರಕರ್ತ ಮೆಹದಿ ಹಸನ್ ಅವರೊಂದಿಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಯೂನುಸ್, ಕಳೆದ ವರ್ಷ ಶೇಖ್ ಹಸೀನಾ ಸರ್ಕಾರದ ಪತನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಕೋಮು ಹಿಂಸಾಚಾರ ನಡೆದಿದೆ ಎಂಬ ಹಲವಾರು ಅಂತರಾಷ್ಟ್ರೀಯ ವರದಿಗಳನ್ನು ತಳ್ಳಿಹಾಕಿದರು. “ನೆರೆಹೊರೆಯವರ ನಡುವೆ ಭೂ ಗಡಿ ಗುರುತಿಸುವಿಕೆ ಮತ್ತು ಇತರ ಸ್ಥಳೀಯ ವಿಷಯಗಳ ಬಗ್ಗೆ ‘ಸಾಮಾನ್ಯ ಸಂಘರ್ಷಗಳು’ ಇವೆ. ಆದರೆ ಈ ಜಗಳಗಳಿಗೆ ಕೋಮು ಬಣ್ಣ ಬಳಿಯಬಾರದು,” ಎಂದು ಅವರು ಪ್ರತಿಪಾದಿಸಿದರು. “ಈ ವಿಷಯದ ಬಗ್ಗೆ ಭಾರತ ಯಾವಾಗಲೂ ಒತ್ತಡ ಹೇರುತ್ತಿರುವುದರಿಂದ ಸರ್ಕಾರವು ಈ ಬಗ್ಗೆ ಬಹಳ ಜಾಗರೂಕವಾಗಿದೆ” ಎಂದು ಅವರು ಹೇಳಿದರು.
ಹಸೀನಾ ಅವರ ಪದಚ್ಯುತಿಯ ನಂತರ, ಬಾಂಗ್ಲಾದೇಶದಲ್ಲಿ ಕೋಮು ಘಟನೆಗಳ ವರದಿಗಳು ವಿಶ್ವಾದ್ಯಂತ ಸುದ್ದಿಯಾಗಿದ್ದವು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ಯೂನುಸ್ ಸರ್ಕಾರವು ಹಿಂದೂಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು “ಅನಾಗರಿಕ” ಎಂದು ಕರೆದಿದ್ದರು. ಟ್ರಂಪ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಯೂನುಸ್, “ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಡೊನಾಲ್ಡ್ ಟ್ರಂಪ್ ಅವರಿಗೆ ಯಾವುದೇ ಜ್ಞಾನವಿದೆ ಎಂಬುದೇ ಅನುಮಾನ,” ಎಂದು ಹೇಳಿದರು.
ಕಳೆದ ನವೆಂಬರ್‌ನಲ್ಲಿ, ಸುಮಾರು 30,000 ಹಿಂದೂಗಳು ಢಾಕಾದ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ತಮ್ಮ ಮೇಲಿನ ಪುನರಾವರ್ತಿತ ದಾಳಿ ಮತ್ತು ಕಿರುಕುಳದಿಂದ ರಕ್ಷಣೆ ನೀಡುವಂತೆ ಯೂನುಸ್ ಅವರನ್ನು ಒತ್ತಾಯಿಸಿದ್ದರು. ಅಲ್ಲದೆ, ಹಿಂದೂ ಮುಖಂಡರ, ವಿಶೇಷವಾಗಿ ಸನ್ಯಾಸಿ ಚಿನ್ಮೊಯ್ ಕೃಷ್ಣ ದಾಸ್ ಅವರ ಮೇಲಿನ ದೇಶದ್ರೋಹದ ಆರೋಪಗಳನ್ನು ಕೈಬಿಡಬೇಕೆಂದು ಆಗ್ರಹಿಸಿದ್ದರು. ಅವರ ಬಂಧನವು ಭಾರತದಲ್ಲೂ ಆಕ್ರೋಶಕ್ಕೆ ಕಾರಣವಾಗಿತ್ತು.
ಬಾಂಗ್ಲಾದೇಶದ ಹಿಂದೂಗಳಿಗೆ ಸಂದೇಶ ನೀಡಿದ ಯೂನುಸ್, ಅವರು ತಮ್ಮನ್ನು ಕೇವಲ ಹಿಂದೂಗಳೆಂದು ಪರಿಗಣಿಸದೇ ಬಾಂಗ್ಲಾದೇಶದ ಪ್ರಜೆಗಳೆಂದು ಭಾವಿಸಬೇಕು. ಆಗ ಅವರು “ನಾವು ಪ್ರತ್ಯೇಕ” ಎಂಬ ಭಾವನೆಯಿಂದ ಹೊರಬರುತ್ತಾರೆ ಎಂದರು. “ನಾನು ಅವರನ್ನು ಭೇಟಿಯಾದಾಗ, ‘ನಾನು ಹಿಂದೂ, ನನ್ನನ್ನು ರಕ್ಷಿಸಿ’ ಎಂದು ಹೇಳಬೇಡಿ. ಬದಲಿಗೆ ‘ನಾನು ಈ ದೇಶದ ಪ್ರಜೆ, ಈ ದೇಶವು ನನಗೆ ನೀಡಬೇಕಾದ ಎಲ್ಲಾ ರಕ್ಷಣೆಗೆ ನಾನು ಅರ್ಹ’ ಎಂದು ಯಾವಾಗಲೂ ಹೇಳಿ. ಆಗ ನಿಮಗೆ ದೊಡ್ಡ ವ್ಯಾಪ್ತಿ ಸಿಗುತ್ತದೆ,” ಎಂದೂ ಯೂನುಸ್ ಬಿಟ್ಟಿ ಸಲಹೆ ನೀಡಿದ್ದಾರೆ.



















