ಹುಬ್ಬಳ್ಳಿ: ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankar) ಹೇಳಿದ್ದಾರೆ.
ಇಲ್ಲಿನ ವರೂರುನಲ್ಲಿರುವ ನವಗ್ರಹ ತೀರ್ಥದಲ್ಲಿ ನಿರ್ಮಿಸಿರುವ ಸುಮೇರು ಪರ್ವತ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಧರ್ಮ(Jainism) ಮೂರು ವಿಚಾರಗಳನ್ನು ಪ್ರತಿ ಬಿಂಬಿಸುತ್ತದೆ. ನಂಬಿಕೆ, ಜ್ಞಾನ, ಆಧ್ಯಾತ್ಮಗಳ ಪ್ರತಿರೂಪವೇ ಜೈನ ಧರ್ಮವಾಗಿದೆ. ಸುಮೇರು ಪರ್ವತ ಧಾರ್ಮಿಕತೆಯ ಮೇರು ಪರ್ವತ, ಸದ್ಯ ವಿಶ್ವ ಶಾಂತಿಯ ಅಗತ್ಯವಿದೆ. ಜೈನ ಧರ್ಮದ ತತ್ವಗಳನ್ನು ಅಳವಡಿಕೊಳ್ಳಬೇಕು. ಮಠ – ಮಂದಿರ ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಮಠ – ಮಂದಿರಗಳು ಸಾಮಾಜಿಕ ಬದಲಾವಣೆಯ ರಹದಾರಿ ಇದ್ದಂತೆ ಎಂದು ಹೇಳಿದ್ದಾರೆ.
ಇಂದು ಮಾತಿಗೆ ಬೆಲೆ ಇಲ್ಲದಂತಾಗಿದೆ. ಶಾಂತಿ ಮಂತ್ರ ಸಮಾಜದಲ್ಲಿ ಇರಬೇಕಾದರೆ, ಆಧ್ಯಾತ್ಮಿಕ ಶಕ್ತಿ ಜನರನ್ನು ಹೆಚ್ಚು ಆಕರ್ಷಿಸಬೇಕು. ನಮ್ಮ ಸಿರಿವಂತ ಸಂಸ್ಕೃತಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಮಾನವೀಯ ಮೌಲ್ಯಗಳು ಶಾಂತಿಗೆ ನಾಂದಿ ಹಾಡುತ್ತದೆ. ಹೀಗಾಗಿ ಶಾಂತಿ ಮಂತ್ರದ ಅವಶ್ಯಕತೆ ಇದೆ. ಭಾರತ ಜಾಗತಿಕ ಮಟ್ಟದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ವಸುದೇವ ಕುಟುಂಬಕಮ್ ಪರಿಕಲ್ಪನೆ ಬರಬೇಕಿದೆ. ನಿಜವಾದ ವಿಕಾಸವಾದಲ್ಲಿ ಮಾತ್ರ ಭಾರತ ವಿಶ್ವಗುರು ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸೇರಿದಂತೆ ಹಲವರು ಇದ್ದರು.



















